ಉಡುಪಿ: ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಮರುಪರಿಶೀಲನೆ ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 516399 ಮಹಿಳೆಯರು, 484137 ಪುರುಷರು, 9 ಇತರ ಸೇರಿ ಒಟ್ಟು 10,00,545 ಮತದಾರರಿದ್ದಾರೆ. ಹಿಂದಿನ ಮತದಾರರ ಪಟ್ಟಿಯೊಂದಿಗೆ ಪ್ರಸ್ತುತ ವಿವರಗಳನ್ನು ಸಂಯೋಜಿಸದಿರುವ 31903 ಹಾಗೂ ದಾಖಲೆಗಳಲ್ಲಿ ವ್ಯತ್ಯಾಸ ಹೊಂದಿರುವ 65803 ಮತದಾರರು ಸೇರಿ ಒಟ್ಟು 97706 ಮಂದಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪಾ ಟಿ. ಕೆ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯತ್ಯಾಸಗಳು ಹಾಗೂ ಲಿಂಕೇಜ್ ಆಗದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲೂಕು ಇಆರ್ಒ ಮುಖಾಂತರ ನಿಯಮಾನುಸಾರ ನೋಟೀಸ್ ಜಾರಿಗೊಳಿಸಲಾಗುತ್ತದೆ. ಮತದಾರರು ತಮ್ಮ ಹಕ್ಕನ್ನು ಪ್ರತಿಪಾದಿಸಲು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಯಾ ಗ್ರಾಮ ಪಂಚಾಯಿತಿ ಅಥವಾ ನಗರ ಪ್ರದೇಶದ ವಾರ್ಡ್ ವ್ಯಾಪ್ತಿಯಲ್ಲಿಯೇ ಈ ವಿಚಾರಣೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿಯಾಗಿ ಎಇಆರ್ಒಗಳನ್ನು ನೇಮಿಸಲಾಗಿದೆ. ನೋಟಿಸ್ ಪಡೆದ ಮತದಾರರು ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಕ್ಕನ್ನು ಪ್ರತಿಪಾದಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಸ್ಐಆರ್ಗೆ ಮುನ್ನ ಒಟ್ಟು 1063876 ಮತದಾರರಿದ್ದರು. ಮನೆ ಮನೆಗೆ ಭೇಟಿ ನೀಡಿ ಬಿಎಲ್ಒಗಳು ಗಣತಿ ನಮೂನೆ ವಿತರಿಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 4145 ಮಂದಿ ಗೈರು, 29361 ವಲಸೆ, 21262 ಮೃತ, 8374 ನಕಲಿ, 189 ಇತರ ಕಾರಣಕ್ಕೆ 63331 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದೇ ಅವಧಿಯಲ್ಲಿ 5914 ಮಂದಿ ಯುವ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು. ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅ.22ರೊಳಗೆ ವಿಚಾರಣೆ ಪೂರ್ಣಗೊಳಿಸಬೇಕಿದ್ದು, ಅ. 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಉಪಸ್ಥಿತರಿದ್ದರು.

