ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಭರ್ಜರಿ ತಯಾರಿ ನಡೆಸಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ಆರ್‌ಬಿಐ ಇಂದು ಆರು ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಹೊಸ ನಿಯಮಗಳು ಗ್ರಾಹಕರ ಹಣಕ್ಕೆ ಹೆಚ್ಚಿನ ಭದ್ರತೆ ನೀಡುವುದಲ್ಲದೆ, ವಂಚಕರು ಸುಲಭವಾಗಿ ಬ್ಯಾಂಕ್ ಖಾತೆಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸಲಿವೆ.
ಬ್ಯಾಂಕುಗಳು ಇನ್ಮುಂದೆ ಪ್ರತಿ ವಹಿವಾಟನ್ನು ಕ್ಷಣಕ್ಷಣಕ್ಕೂ ಗಮನಿಸಲಿವೆ. ಯಾವುದಾದರೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಆ ವಹಿವಾಟನ್ನು ಸ್ಥಗಿತಗೊಳಿಸುವ ತಂತ್ರಜ್ಞಾನ ಅಳವಡಿಕೆಗೆ ಸೂಚಿಸಲಾಗಿದೆ.
ಬಹುಹಂತದ ದೃಢೀಕರಣ : ಕೇವಲ OTP ಮಾತ್ರವಲ್ಲದೆ, ಇನ್ನು ಮುಂದೆ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಬಯೋಮೆಟ್ರಿಕ್ ಅಥವಾ ಇತರ ಹೆಚ್ಚುವರಿ ಸುರಕ್ಷತಾ ಹಂತಗಳನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
ಡಿಜಿಟಲ್ ಪಾವತಿ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ : ವಂಚನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕೇಂದ್ರಿಕೃತ ವ್ಯವಸ್ಥೆಯೊಂದನ್ನು ಸ್ಥಾಪಿಸಲಾಗುತ್ತಿದೆ. ಇದು ವಿವಿಧ ಬ್ಯಾಂಕುಗಳ ನಡುವೆ ವಂಚಕರ ಜಾಲದ ಬಗ್ಗೆ ಶೀಘ್ರ ಮಾಹಿತಿ ನೀಡಲು ಸಹಕಾರಿಯಾಗಲಿದೆ.
ಗ್ರಾಹಕ ಜಾಗೃತಿ ಮತ್ತು ಸುಲಭ ದೂರು ಸಲ್ಲಿಕೆ : ವಂಚನೆಗೊಳಗಾದ ಗ್ರಾಹಕರು ತಕ್ಷಣವೇ ದೂರು ನೀಡಲು ಸರಳವಾದ ಪೋರ್ಟಲ್ ಮತ್ತು ಸಹಾಯವಾಣಿಗಳನ್ನು ಬ್ಯಾಂಕುಗಳು ಬಲಪಡಿಸಬೇಕೆಂದು ಆರ್‌ಬಿಐ ಕಟ್ಟುನಿಟ್ಟಿನ ಆದೇಶ ನೀಡಿದೆ.
ಆಪ್ ಅಪ್‌ಡೇಟ್ ಮತ್ತು ಸೆಕ್ಯುರಿಟಿ ಆಡಿಟ್ : ಪ್ರತಿಯೊಂದು ಪಾವತಿ ಆಪ್‌ಗಳು ಕಾಲಕಾಲಕ್ಕೆ ಸುರಕ್ಷತಾ ಅಪ್‌ಡೇಟ್ ಪಡೆಯುವುದನ್ನು ಮತ್ತು ಕಟ್ಟುನಿಟ್ಟಾದ ಸೆಕ್ಯುರಿಟಿ ಆಡಿಟ್ ಮಾಡಿಸುವುದನ್ನು ಆರ್‌ಬಿಐ ಕಡ್ಡಾಯ ಮಾಡಿದೆ.
ಡೇಟಾ ಪ್ರೈವಸಿ ನಿಯಮಗಳ ಬಿಗಿಗೊಳಿಸುವಿಕೆ : ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಹೊಸ ಡೇಟಾ ಪ್ರೊಟೆಕ್ಷನ್ ಮಾನದಂಡಗಳನ್ನು ವಿಧಿಸಲಾಗಿದೆ.

