ಗರ್ಭಿಣಿ ಹೊಟ್ಟೆಗೆ ಒದ್ದ ಸಾಲ ವಸೂಲಿಗಾರರು : ಅವಧಿಪೂರ್ವ ಹೆರಿಗೆಯಾಗಿ ಅವಳಿ ಮಕ್ಕಳು ಮೃತ..!

0
111

ಹಾವೇರಿ : ತುಂಬು ಗರ್ಭಿಣಿಯೊಬ್ಬರಿಗೆ ಅವಧಿಪೂರ್ವ (22 ವಾರ) ಅವಳಿ ಮಕ್ಕಳು ಜನಿಸಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ದಲ್ಲಿ ನಡೆದಿದೆ. ಆಕೆಯ ಮೇಲೆ ಸಾಲ ವಸೂಲಿಗೆ ಬಂದಿದ್ದವರು ಹಲ್ಲೆ ನಡೆಸಿದ್ದರಿಂದ ಅವಾಂತರ ನಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಲ ವಸೂಲಿಗೆ ಬಂದವರು ಗರ್ಭಿಣಿ ಹೊಟ್ಟೆಗೆ ಒದ್ದು, ಕೈನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗರ್ಭಿಣಿ ಪವಿತ್ರಾ ಲಮಾಣಿ ಅವರ ಮೇಲೆ ಮಾ. 28ರಂದು ಹಲ್ಲೆ ನಡೆದಿದೆ ಎನ್ನಲಾಗಿದ್ದು, ಏ.7ರಂದು ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳು ಅವಧಿಪೂರ್ವ ಜನಿಸಿ ಸಂಜೆ ಮೃತಪಟ್ಟಿವೆ.

ಪವಿತ್ರಾ ಅವರ ತಾಯಿ ಹಾಲವ್ವ ಲಮಾಣಿ ನೀಡಿದ ದೂರಿನ ಮೇರೆಗೆ ಸವಣೂರು ಪೊಲೀಸರು ಆರೋಪಿತರಾದ ಸುರೇಶ ಹಾಲಪ್ಪ ಲಮಾಣಿ, ಪರಶುರಾಮ ಹಾಲಪ್ಪ ಲಮಾಣಿ, ಮಹೇಶ ಲಮಾಣಿ ಹಾಗೂ ಸಕ್ಕುಬಾಯಿ ಲಮಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲವಸೂಲಿಗೆ ಹಲ್ಲೆ: ಮಾ.28ರಂದು ರಾತ್ರಿ ಪವಿತ್ರಾ ಅವರ ಸೀಮಂತದ ಸಂಬಂಧ ಮಾತಾಡುತ್ತ ಮನೆ ಮುಂದೆ ಕುಳಿತಾಗ ಆರೋಪಿತರು ತಾವು ಸಾಲ ನೀಡಿದ್ದ ಹಣ ಮರಳಿಸುವಂತೆ ಹಾಲವ್ವ (ಪವಿತ್ರಾಳ ತಾಯಿ) ಅವರಿಗೆ ಹಲ್ಲೆ ಮಾಡಿದ್ದಾರೆ.

ಈ ವೇಳೆ ಬಿಡಿಸಲು ಬಂದ ಪವಿತ್ರಾ ಅವರ ಹೊಟ್ಟೆಯ ಮೇಲೂ ಕಾಲಿಂದ ಒದ್ದಿದ್ದಾರೆ. ಪವಿತ್ರಾ ಅವರ ಅತ್ತೆ, ಮಾವ ಮತ್ತು ಗಂಡನ ಅಣ್ಣನಿಗೂ ಹೊಡೆದಿದ್ದಾರೆ. ನೋವಿಗೆ ತುತ್ತಾಗಿದ್ದ ಪವಿತ್ರಾ ಅವರನ್ನು ಚಿಕಿತ್ಸೆಗಾಗಿ ಏ.7ರಂದು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವಳಿ ಮಕ್ಕಳು ಅವಧಿಪೂರ್ವ ಜನನವಾಗಿ ಮೃತಪಟ್ಟಿವೆ ಎಂದು ಹಾಲವ್ವನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here