ಕಾರ್ಕಳ : ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಇಲ್ಲೊಬ್ಬರು ರಿಕ್ಷಾ ಚಾಲಕ ಸಾಧಿಸಿ ತೋರಿಸಿದ್ದಾರೆ. ತನ್ನ 43ನೇ ವರ್ಷದಲ್ಲಿ ಪಿಯುಸಿ ತೇರ್ಗಡೆಯಾದ ಅವರ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಹೆಸರು ಪ್ರಶಾಂತ್ ಪೂಜಾರಿ(43), ವೃತ್ತಿ ಯಲ್ಲಿ ರಿಕ್ಷಾ ಚಾಲಕ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ನಿವಾಸಿಯಾಗಿರುವ ಪ್ರಶಾಂತ್ ಪೂಜಾರಿ ಅವರಿಗೆ ಬಾಲ್ಯದಲ್ಲಿದ್ದ ಬಡತನ ಓದಲು ಅವಕಾಶ ಕಲ್ಪಿಸಿಕೊಡಲಿಲ್ಲ. ಅತ್ತೂರು ಸೈಂಟ್ ಲಾರೆನ್ಸ್ ಹೈಸ್ಕೂಲ್‌ನಲ್ಲಿ 1996-97ನೇ ಸಾಲಿನಲ್ಲಿ9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಬಳಿಕ, ಶಾಲೆಯ ಮೆಟ್ಟಿಲು ಹತ್ತಿಲ್ಲ. ಕಲಿಸುವ ವಾತಾವರಣ ಕೂಡ ಮನೆಯಲ್ಲಿರಲಿಲ್ಲ.
ಆದರೆ ತಾನು ವಿದ್ಯಾವಂತನಾಗಬೇಕೆಂಬ ನಿರ್ಧಾರ ಮನಸ್ಸಿನಲ್ಲಿ ಅಚಲವಾಗಿತ್ತು. ಅದಕ್ಕಾಗಿ ಛಲ ಬಿಡದೆ ಪ್ರಯತ್ನ ಮುಂದುವರಿಸಿದ್ದಾರೆ. ವೃತ್ತಿ ಜತೆಗೆ ಛಲದಿಂದ ಓದಿ ಪಿಯುಸಿ ಪಾಸಾಗಿದ್ದಾರೆ. ಅತ್ತೂರು ಹೈಸ್ಕೂಲ್‌ನ ಶಿಕ್ಷಕರ ನೆರವಿನಿಂದ 2024-25ನೇ ಸಾಲಿನಲ್ಲಿ ಎಸ್‌ಎಸ್ ಎಲ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದರು.
ಮುಂದೆ ಕಲಿಯ ಬೇಕೆಂಬ ಹಂಬಲವಿದ್ದ ಕಾರಣ, ಕಾರ್ಕಳ ಯಶಸ್ವಿ ಟ್ಯುಟೋರಿಯಲ್ ನಲ್ಲಿ ಮೂರು ತಿಂಗಳ ಕಾಲ ಪಿಯುಸಿ ಕೋಚಿಂಗ್ ಪಡೆದು ಪರೀಕ್ಷೆ ಬರೆದು, ಕಲಾ ವಿಭಾಗದಲ್ಲಿ 334 ಅಂಕ ಪಡೆದಿದ್ದಾರೆ.

