ಕೊಳಲಗಿರಿ–ಮಣಿಪಾಲ ರಸ್ತೆಯ ಬೊಬ್ಬರ್ಯ ದೈವಸ್ಥಾನದ ಎದುರುಗಡೆ ಹಲವು ದಿನಗಳಿಂದ ಅಪಾಯಕಾರಿ ಹೊಂಡವೊಂದು ನಿರ್ಮಾಣಗೊಂಡಿದ್ದು, ವಾಹನ ಸವಾರರಿಗೆ ನಿರಂತರ ಅಪಘಾತಗಳ ಭೀತಿ ಉಂಟಾಗುತ್ತಿತ್ತು. ಹೊಂಡ ತಪ್ಪಿಸಲು ಪ್ರಯತ್ನಿಸುವ ಸಂದರ್ಭಗಳಲ್ಲಿ ಸಣ್ಣ–ದೊಡ್ಡ ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಪರಿಸ್ಥಿತಿಯನ್ನು ಗಮನಿಸಿದ ಪರಾರಿ ಶ್ರೀ ಬೊಬ್ಬರ್ಯ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಸಾರ್ವಜನಿಕ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮುಂದಾಗಿ, ಜೆಲ್ಲಿ ಮತ್ತು ಕಾಂಕ್ರೀಟ್ ಬಳಸಿ ಹೊಂಡವನ್ನು ಮುಚ್ಚುವ ಕಾರ್ಯವನ್ನು ಕೈಗೊಂಡರು.
ಇದರ ಜೊತೆಗೆ ಶೀಂಬ್ರ ಸೇತುವೆಯಿಂದ ಕೊಳಲಗಿರಿ ತನಕ ರಸ್ತೆ ಬದಿಯ ಗಿಡಗುಂಟೆ ಹಾಗೂ ಹುಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲಾಯಿತು.
ಸಮಿತಿಯ ಈ ಜನಪರ ಕಾರ್ಯಕ್ಕೆ ಅಧ್ಯಕ್ಷ ಗುರುರಾಜ್ ಭಟ್ ಕೊಳಲಗಿರಿ, ಗೌರವಾಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ ಹಾಗೂ ಪ್ರಧಾನ ಅರ್ಚಕ ಲಕ್ಷ್ಮೀಶ ಭಟ್ ಅವರು ಹರ್ಷ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.

