ಬೆಂಗಳೂರು : ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಜನರು ಸೆಕೆ, ತೀವ್ರ ತಾಪಮಾನದ ಝಳಕ್ಕೆ ಪರದಾಡುತ್ತಿದ್ದಾರೆ. ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 1.6 ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಾಗಿದೆ. ಮುಂದಿನ 5 ದಿನ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಲಿವೆ ಎಂಬ ಮುನ್ಸೂಚನೆ ನೀಡಲಾಗಿದೆ.
12ಜಿಲ್ಲೆಗಳಿಗೆ ಉಷ್ಣ ಅಲೆ ಕಂಡು ಬರಲಿದ್ದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಪರ್ಯಾಸವೆಂದರೆ ಮಲೆನಾಡು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ ಆಗಲಿದೆ. ಇಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯವಾಗಿರಲಿದೆ. ಇತರ ಜಿಲ್ಲೆಗಳಲ್ಲಿ ಅಧಿಕ ಉರಿಬಿಸಿಲು ಕಂಡು ಬರಲಿದ್ದು, ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದೆ.
ಇಂದಿನ ಏಪ್ರಿಲ್ 20ರವರೆಗೆ 5 ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಗೆ ಅತ್ಯಧಿಕ ಬಿಸಿಲು ಕಂಡು ಬರುವ ಹಿನ್ನೆಲೆಯಲ್ಲಿ ‘ಉಷ್ಣ ಅಲೆ’ ಹಿನ್ನೆಲೆಯ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಏಪ್ರಿಲ್ 18 ರಿಂದ 19 ರವರೆಗೆ ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ಏ.19 ರವರೆಗೆ ಕರಾವಳಿ ಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ನಿರೀಕ್ಷೆ ಇದೆ. ಇದಕ್ಕೆ ಹವಾಮಾನ ವೈಪರೀತ್ಯ ಕಾರಣವೆಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ದಾವಣಗೆರೆವರೆಗೆ ಇತ್ತ ಚಾಮರಾಜನಗರವರೆಗೆ ಬಿಸಿಲು ಸಾಮಾನ್ಯವಾಗಿರಲಿದ್ದು, ಆಗಾಗ ಮಬ್ಬು ವಾತಾವರಣ ಕಂಡು ಬರಬಹುದು ಎನ್ನಲಾಗಿದೆ.
ಉತ್ತರ ಒಳನಾಡಿನಲ್ಲಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ. ಆಗ್ನೇಯ ಮಧ್ಯ ಪ್ರದೇಶದಿಂದ ವಿದರ್ಭ, ಮರಾಠವಾಡದ ಮೂಲಕ ಕೊಮೊರಿನ್ ಪ್ರದೇಶವರೆಗೆ, ಉತ್ತರ ಒಳನಾಡಿನ ಕರ್ನಾಟಕ ಮತ್ತು ತಮಿಳುನಾಡಿನ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಇನ್ನೊಂದು ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದೆ.
ಕರ್ನಾಟಕ ಮತ್ತು ಪಕ್ಕದ ಮಹಾರಾಷ್ಟ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ಎತ್ತರದಲ್ಲಿ ತೀವ್ರ ಸುಳಿಗಾಳಿ ಮುಂದುವರಿದಿದೆ. ಕರಾವಳಿ ಕರ್ನಾಟಕದಿಂದ ಉತ್ತರ ಕೇರಳದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿದ್ದ ಸುಳಿಗಾಳಿ ತೀವ್ರ ಕಡಿಮೆ ಆಗಿದೆ. ಇವುಗಳಲ್ಲಿ ಆಗುತ್ತಿರುವ ಬದಲಾವಣೆ ಕಾರಣದಿಂದ ರಾಜ್ಯ ಮಲೆನಾಡು, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಆಗುವ ಸಂಭವವಿದೆ. ಗರಿಷ್ಠ ತಾಪಮಾನವು ಹಿಡಿತದಲ್ಲಿದೆ.

