ಕುಂದಾಪುರ : ಕೊಲ್ಲೂರು-ಕುಂದಾಪುರ ಮುಖ್ಯ ರಸ್ತೆಯ ವಂಡ್ಸೆ ಗ್ರಾಮ ಪಂಚಾಯತ್ ಎದುರು ನಡೆದ ರಸ್ತೆ ಅಪಘಾತದಲ್ಲಿ ಗೃಹಿಣಿಯೊಬ್ಬರು ಮೃತಪಟ್ಟಿದ್ದಾರೆ. ವಂಡ್ಸೆ ನಿವಾಸಿ ಶಶಿಕಲಾ (52) ಮೃತಪಟ್ಟವರು. ಸಂಜೆ 7:15ರ ಸುಮಾರಿಗೆ ಶಶಿಕಲಾ ಅವರು ದಿನಸಿ ಅಂಗಡಿಯಿಂದ ಸಾಮಾನು ತರಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕೊಲ್ಲೂರು ಕಡೆಯಿಂದ ಕುಂದಾಪುರಕ್ಕೆ ಅತಿವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಇವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಶಶಿಕಲಾ ಅವರು ಪಕ್ಕದ ಚರಂಡಿಗೆ ಬಿದ್ದಿದ್ದಾರೆ. ನಿಯಂತ್ರಣ ಕಳೆದುಕೊಂಡ ಕಾರು ಕೂಡ ಸ್ವಲ್ಪ ದೂರ ಸಾಗಿ ಚರಂಡಿಗೆ ಬಿದ್ದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಶಿಕಲಾ ಅವರನ್ನು ತಕ್ಷಣವೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

