ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಇಂದು ಅದ್ದೂರಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7.01ಕ್ಕೆ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಹಾಗೂ ಪಾತ್ರಗಳ ಫಸ್ಟ್ ಲುಕ್‌ಗಳು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿವೆ. ಯಶ್ ಅವರ ವಿಭಿನ್ನ ಗೆಟಪ್ ಹಾಗೂ ಚಿತ್ರದ ಭಿನ್ನ ಕಥಾಹಂದರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
ಟ್ರೇಲರ್ ಬಿಡುಗಡೆಗೆ ಶಿವಣ್ಣ ಸಾಥ್
‘ಟಾಕ್ಸಿಕ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಶಿವಣ್ಣನ ಆಗಮನವನ್ನು ಖಚಿತಪಡಿಸುವ ವಿಶೇಷ ಪೋಸ್ಟರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಬಂದಿದೆ.
ಶಿವರಾಜ್‌ಕುಮಾರ್ ಮತ್ತು ಯಶ್ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ. ಚಿತ್ರರಂಗದ ಹಲವು ಗಣ್ಯರು ಹಾಗೂ ‘ಟಾಕ್ಸಿಕ್’ ತಂಡದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬಿಗ್ ಬಜೆಟ್‌ನ ಬಹುನಿರೀಕ್ಷಿತ ಸಿನಿಮಾ
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ನಿರ್ಮಿಸಿರುವ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕಥೆ ಮತ್ತು ಪಾತ್ರಗಳ ಬಗ್ಗೆ ಇದುವರೆಗೆ ಸೀಮಿತ ಮಾಹಿತಿಯನ್ನು ಮಾತ್ರ ಚಿತ್ರತಂಡ ಹಂಚಿಕೊಂಡಿದ್ದು, ಟ್ರೇಲರ್‌ನಲ್ಲಿ ಆ್ಯಕ್ಷನ್, ಕಥಾಹಂದರ ಹಾಗೂ ಪಾತ್ರಗಳ ಕುರಿತು ಹೆಚ್ಚಿನ ಸುಳಿವು ಸಿಗುವ ನಿರೀಕ್ಷೆಯಿದೆ.
ಐದು ಭಾಷೆಗಳಲ್ಲಿ ತೆರೆಗೆ
‘ಟಾಕ್ಸಿಕ್’ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ
ಯಶ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿರುವ ‘ಟಾಕ್ಸಿಕ್’ ಚಿತ್ರವು ಆಗಸ್ಟ್ 26, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಬಳಿಕ ಚಿತ್ರದ ಪ್ರಚಾರ ಕಾರ್ಯಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆಯಿದೆ.
ಇದೀಗ ಸಂಜೆ 7.01ರ ಟ್ರೇಲರ್ ಬಿಡುಗಡೆ ಕ್ಷಣಕ್ಕಾಗಿ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದ ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ‘ಟಾಕ್ಸಿಕ್’ ಟ್ರೇಲರ್ ಹವಾ ಸೃಷ್ಟಿಸುವ ನಿರೀಕ್ಷೆಯಿದೆ.

