‘PM ಲೋನ್ ಸ್ಕೀಮ್’ ಹೆಸರಿನಲ್ಲಿ ವಂಚನೆ..!

0
72

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ನಲ್ಲಿ ‘ಪ್ರಧಾನ ಮಂತ್ರಿ ಲೋನ್ ಸ್ಕೀಮ್’ ಅಡಿಯಲ್ಲಿ ಕೇವಲ ಆಧಾರ್ ಕಾರ್ಡ್ ಬಳಸಿಕೊಂಡು 3 ಲಕ್ಷ ರೂಪಾಯಿವರೆಗೆ ತಕ್ಷಣದ ಸಾಲ ನೀಡಲಾಗುವುದು ಎಂಬ ಜಾಹೀರಾತುಗಳು ವೈರಲ್ ಆಗುತ್ತಿವೆ.

ಈ ಕುರಿತು ತನಿಖೆ ನಡೆಸಿರುವ ಸರ್ಕಾರದ ಅಧಿಕೃತ ಸಂಸ್ಥೆ ಪಿಐಬಿ ಫ್ಯಾಕ್ಟ್ ಚೆಕ್ (PIB Fact Check), ಕೇಂದ್ರ ಸರ್ಕಾರ ಇಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಸಂಪೂರ್ಣವಾಗಿ ನಕಲಿ ಸುದ್ದಿಯಾಗಿದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗಬಾರದು ಎಂದು ಎಚ್ಚರಿಸಿದೆ.

ಕನಿಷ್ಠ ದಾಖಲೆಗಳೊಂದಿಗೆ ಭಾರಿ ಮೊತ್ತದ ಸಾಲ ನೀಡುವುದಾಗಿ ವಂಚಕರು ಜನರನ್ನು ಸೆಳೆಯುತ್ತಿದ್ದಾರೆ. “ಈಗಲೇ ಅರ್ಜಿ ಸಲ್ಲಿಸಿ”, “ಸೀಮಿತ ಅವಧಿಯ ಅವಕಾಶ” ಎಂಬಂತಹ ಪದಗಳನ್ನು ಬಳಸಿ ಜನರು ಯೋಚಿಸುವ ಮೊದಲೇ ಕ್ಲಿಕ್ ಮಾಡುವಂತೆ ಮಾಡುತ್ತಾರೆ.

ಜಾಹೀರಾತಿನಲ್ಲಿರುವ ಲಿಂಕ್ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಅದು ಬೇರೊಂದು ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಪಡೆಯಲಾಗುತ್ತದೆ.

ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಬಳಸಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡುವುದು ಅಥವಾ ನಿಮ್ಮ ಹೆಸರಿನಲ್ಲಿ ಬೇರೆ ಕಡೆ ವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಯಾವುದೇ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಕೇವಲ myscheme.gov.in ನಂತಹ ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಭೇಟಿ ನೀಡಿ. ಅಪರಿಚಿತ ವೆಬ್‌ಸೈಟ್ ಅಥವಾ ಆಪ್‌ಗಳಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಎಂದಿಗೂ ನೀಡಬೇಡಿ. ಇಂತಹ ಸಂಶಯಾಸ್ಪದ ಜಾಹೀರಾತುಗಳು ಕಂಡುಬಂದಲ್ಲಿ ಕೂಡಲೇ ಪಿಐಬಿ ಫ್ಯಾಕ್ಟ್ ಚೆಕ್ ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ.

LEAVE A REPLY

Please enter your comment!
Please enter your name here