ಭೂಮಾಪಕರ ಮುಷ್ಕರ: ತುರ್ತು ಕ್ರಮಕ್ಕೆ ಶಾಸಕ ಯಶ್‌ಪಾಲ್‌ ಮನವಿ

0
43

ಉಡುಪಿ : ಕಳೆದ 40 ದಿನಗಳಿಂದ ನಡೆಯುತ್ತಿರುವ ಪರವಾನಗಿ ಭೂಮಾಪಕರ ಮುಷ್ಕರದಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ವಹಿಸುವಂತೆ ಶಾಸಕ ಯಶ್‌ಪಾಲ್‌ ಸುವರ್ಣ, ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಮುಷ್ಕರದಿಂದಾಗಿ ಭೂಮಾಪನ, ಸರ್ವೆ, ಪಹಣಿ ತಿದ್ದುಪಡಿ, ಖಾತೆ ಬದಲಾವಣೆ ಸೇರಿದಂತೆ ಜಮೀನು ಸಂಬಂಧಿತ ಅನೇಕ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ರೈತರು, ಬಡಜನರು, ಮನೆ ನಿರ್ಮಾಣಕ್ಕೆ ಸಾಲ ಪಡೆಯುವವರು ಹಾಗೂ ಸಾಮಾನ್ಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.

ರಾಜ್ಯದಾದ್ಯಂತ ಸುಮಾರು 6 ಸಾವಿರ ಪರವಾನಗಿ ಭೂಮಾಪಕರು, ಉಡುಪಿ ಜಿಲ್ಲೆಯಲ್ಲಿ 118 ಮಂದಿ ಹಾಗೂ ಉಡುಪಿ ತಾಲ್ಲೂಕಿನಲ್ಲಿ 22 ಮಂದಿ ಮುಷ್ಕರ ನಿರತರಾಗಿದ್ದಾರೆ ಎಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಭೂಮಾಪನ ಅರ್ಜಿಗಳ ವಿಲೇವಾರಿ ಬಾಕಿ ಇದ್ದು, ಉಡುಪಿ ತಾಲ್ಲೂಕಿನಲ್ಲಿ 350ಕ್ಕೂ ಅಧಿಕ ಭೂಮಾಪನ ಅರ್ಜಿಗಳು ಬಾಕಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಗಂಭೀರ ಸಮಸ್ಯೆಯನ್ನು ತಕ್ಷಣ ಪರಿಗಣಿಸಿ ಪರವಾನಗಿ ಭೂಮಾಪಕರೊಂದಿಗೆ ಮಾತುಕತೆ ನಡೆಸಿ, ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಿ, ಮುಷ್ಕರವನ್ನು ಶೀಘ್ರ ಅಂತ್ಯಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here