ವಾರಾಹಿ ಕುಡಿಯುವ ನೀರಿನ ಸೇತುವೆಯ ಪಿಲ್ಲರ್ ಶಿಥಿಲ: ಕಳಪೆ ಕಾಮಗಾರಿ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ಆಕ್ರೋಶ – ಜಿಲ್ಲಾಧಿಕಾರಿಗೆ ದೂರು

0
5

ಉಡುಪಿ : ಉಡುಪಿ ನಗರಕ್ಕೆ ವಾರಾಹಿ ಯೋಜನೆಯ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಸ್ವಾಗತಾರ್ಹ ವಿಚಾರವೇ ಸರಿ. ಆದರೆ, ಇದಕ್ಕೆ ಪೂರಕವಾಗಿ ಸ್ವರ್ಣಾ ನದಿಗೆ ಅಡ್ಡಲಾಗಿ ಪಾರಂಪಳ್ಳಿ ಸಮೀಪ ನಿರ್ಮಿಸಿರುವ ಸೇತುವೆಯ ಕೆಳಭಾಗದ ಬೃಹತ್ ಪಿಲ್ಲರ್‌ಗಳು ಅತ್ಯಂತ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬೀಳುವ ಹಂತ ತಲುಪಿವೆ ಎಂದು ತುಳುನಾಡ ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕ ಆರೋಪಿಸಿದೆ.

ಈ ಕುರಿತು ಇಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ವೇದಿಕೆಯ ಪದಾಧಿಕಾರಿಗಳು, ಒಂದು ವೇಳೆ ಈ ಪಿಲ್ಲರ್‌ಗಳು ಕುಸಿದರೆ ಇಡೀ ಉಡುಪಿ ನಗರವೇ ನೀರಿನ ಅಭಾವದಿಂದ ತತ್ತರಿಸಿ ಹೋಗುತ್ತದೆ. ಆಗುವ ಅನಾಹುತ ಊಹೆಗೂ ನಿಲುಕದ್ದು ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಮುಖ ಆರೋಪಗಳು:

ಕಳಪೆ ಕಾಮಗಾರಿ: ಸೇತುವೆ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಮತ್ತು ಗುತ್ತಿಗೆದಾರರೇ ನೇರ ಹೊಣೆ. ಸಾರ್ವಜನಿಕ ಹಣ ಪೋಲು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ರೈತರ ಜಮೀನು ಕೊಚ್ಚಿ ಹೋಗಿದೆ: ಕಾಮಗಾರಿ ವೇಳೆ ನದಿಗೆ ಹಾಕಿದ ಮಣ್ಣನ್ನು ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗದೆ, ಪಕ್ಕದಲ್ಲಿರುವ ರೈತರ ಜಮೀನುಗಳು ಕೊಚ್ಚಿ ಹೋಗಿವೆ.

ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ವೇದಿಕೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಜಯ ಪೂಜಾರಿ ಲಕ್ಷ್ಮೀನಗರ ಅಧ್ಯಕ್ಷರು ಜಿಲ್ಲಾ ಕಾರ್ಮಿಕ ಘಟಕ , ನಾಗಲಕ್ಷ್ಮಿ, ಸುಬ್ರಮಣ್ಯ ನಗರ ಅಧ್ಯಕ್ಷ ಜಿಲ್ಲಾ ಮಹಿಳಾ ಘಟಕ ಮನೋಜ್ ಕೆ.ಜಿ. ರೋಡ್ ಜಿಲ್ಲಾ ಉಪಾಧ್ಯಕ್ಷರು, ಸುಭಾಷ್ ಸುಧನ್ ಜಿಲ್ಲಾ ಜೊತೆ ಕಾರ್ಯದರ್ಶಿ , ನಿತಿನ್ ಕುಮಾರ್ ಶೆಟ್ಟಿ ಅಧ್ಯಕ್ಷರು ಕಾಪು ಘಟಕ ಕೃಷ್ಣಾನಂದ ನಾಯಕ್ ಅಧ್ಯಕ್ಷರು ಬೈರಂಪಲ್ಲಿ ಘಟಕ ಪವಿತ್ರ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಮಹಿಳಾ ಘಟಕ ಗಾಯತ್ರಿ ಉಪಾಧ್ಯಕ್ಷರು ಜಿಲ್ಲಾ ಮಹಿಳಾ ಘಟಕ ಮಂಜುಳಾ, ಅನುಸೂಯ ಶೆಟ್ಟಿ ಅಧ್ಯಕ್ಷರು ಕಾಪು ಮಹಿಳಾ ಘಟಕ , ಕೃಷ್ಣ ಮಾರ್ಪಳ್ಳಿ, ಗುಣಕರ, ಸಂತೋಷ್ ಭಂಡಾರಿ, ರವಿ ಬ್ರಹ್ಮಾವರ, ಉದಯ್ ನಾಯ್ಕ್, ಸಂತೋಷ್ ಶೆಟ್ಟಿ ಬೈರಂಪಳ್ಳಿ, ನಿರ್ಮಲಾ ಎಂ. ಮೆಂಡನ್, ಮಮತಾ, ಉಷಾ ಕೋಟ್ಯಾನ್, ಶ್ಯಾಮಲಾ, ಜ್ಯೋತಿ ಆರ್. ಹಾಗೂ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.