ಪ್ರಿಯಕರನನ್ನು ಕಟ್ಟಿ ಬೆಂಕಿ ಹಚ್ಚಿ ಕೊಂದ ಗೆಳತಿ..!

0
172

ಬೆಂಗಳೂರು : ನಗರದಲ್ಲಿ ಬೆಚ್ಚಿಬೀಳಿಸುವಂತಹ ಭೀಕರ ಘಟನೆಯೊಂದು ವರದಿಯಾಗಿದ್ದು, ಪ್ರಿಯಕರನನ್ನು ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪದಲ್ಲಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಬೆಂಗಳೂರಿನ ಅಂಜನಾಪುರದಲ್ಲಿ ಮಂಗಳವಾರ (ಏಪ್ರಿಲ್ 21) ಈ ಘಟನೆ ನಡೆದಿದೆ. ಕಿರಣ್ (27) ಮೃತಪಟ್ಟ ಯುವಕನಾಗಿದ್ದು, ಪ್ರೇರಣಾ ಎಂಬ ಯುವತಿ ಆರೋಪಿಯಾಗಿದ್ದಾಳೆ. ಇಬ್ಬರೂ ರಾಜಾಜಿನಗರದಲ್ಲಿನ ಟೆಲಿಕಾಂ ಆಪರೇಟರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕಿರಣ್ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಹಾಗೂ ಮದುವೆಯಾಗುವುದಿಲ್ಲ ಎಂದು ಪ್ರೇರಣಾ ಅನುಮಾನಗೊಂಡಿದ್ದಾಳೆ. ಈ ಹಿನ್ನೆಲೆ ಕಿರಣ್‌ನ್ನು ಮನೆಗೆ ಕರೆಯಿಸಿಕೊಂಡು ‘ವೆಸ್ಟರ್ನ್ ಸ್ಟೈಲ್’ನಲ್ಲಿ ಪ್ರಪೋಸ್ ಮಾಡುತ್ತೇನೆ ಎಂದು ಹೇಳಿ ಕುರ್ಚಿಯಲ್ಲಿ ಕೂರಿಸಿ, ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲುಗಳನ್ನು ಹಗ್ಗದಿಂದ ಬಂಧಿಸಿದ್ದಾಳೆ.

ಆದ ಬಳಿಕ ಪೂರ್ವಸಿದ್ಧತೆಯಿಂದ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ಕ್ರೂರ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ರೂಪದಲ್ಲೂ ದಾಖಲಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ ಡಿ.ಎಲ್. ನಾಗೇಶ್, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here