ಗುರುಗ್ರಾಮ್ : Suzuki Motorcycle India Pvt. Ltd. (ಎಸ್‌ಎಂಐಪಿಎಲ್) ಭಾರತದಲ್ಲಿ ತನ್ನ ಉತ್ಪಾದನಾ ಕಾರ್ಯಾರಂಭದಿಂದ 20 ವರ್ಷಗಳನ್ನು ಪೂರೈಸಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.

2006ರಲ್ಲಿ ಕಾರ್ಯಾರಂಭ ಮಾಡಿದ ಸಂಸ್ಥೆ, ಎರಡು ದಶಕಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿ ದೇಶದ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿಯ ಮಾರಾಟ ದ್ವಿಗುಣಗೊಂಡಿದ್ದು, ಬಲವಾದ ಬೇಡಿಕೆ ಮತ್ತು ಹೊಸ ಉತ್ಪನ್ನ ಆವಿಷ್ಕಾರಗಳು ಇದಕ್ಕೆ ಕಾರಣವಾಗಿವೆ.
ಕಂಪನಿ 10 ಮಿಲಿಯನ್ (ಒಂದು ಕೋಟಿಗೂ ಹೆಚ್ಚು) ದ್ವಿಚಕ್ರ ವಾಹನಗಳ ಉತ್ಪಾದನೆ ಸಾಧಿಸಿ ಮತ್ತೊಂದು ಪ್ರಮುಖ ಮೈಲಿಗಲ್ಲು ತಲುಪಿದೆ. 2006ರಲ್ಲಿ ಸುಜುಕಿ ಹೀಟ್ 125 ಮತ್ತು ಸುಜುಕಿ ಝ್ಯೂಸ್ 125 ಮೂಲಕ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಸಂಸ್ಥೆ, 2007ರಲ್ಲಿ ಅಕ್ಸೆಸ್ 125 ಸ್ಕೂಟರ್ ಬಿಡುಗಡೆ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿತು.
ಇದೀಗ ಕಂಪನಿ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಫ್ಲೆಕ್ಸ್-ಫ್ಯೂಯೆಲ್ ತಂತ್ರಜ್ಞಾನಗಳತ್ತ ಗಮನ ಹರಿಸಿದ್ದು, ಹೊಸ ತಂತ್ರಜ್ಞಾನಗಳೊಂದಿಗೆ ಭವಿಷ್ಯಕ್ಕೆ ಸಜ್ಜಾಗಿದೆ. ಖಾರ್ಖೋಡದಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪನೆಗೂ ಯೋಜನೆ ರೂಪಿಸಲಾಗಿದೆ.
ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ Kenichi Umeda ಅವರು, “ಗ್ರಾಹಕರು, ಡೀಲರ್‌ಗಳು ಮತ್ತು ಉದ್ಯೋಗಿಗಳ ಬೆಂಬಲದಿಂದಲೇ ಈ ಸಾಧನೆ ಸಾಧ್ಯವಾಗಿದೆ. ಭಾರತದಲ್ಲಿ ನಮ್ಮ ವಿಸ್ತರಣೆ ಮುಂದುವರಿಯಲಿದೆ,” ಎಂದು ತಿಳಿಸಿದ್ದಾರೆ.
ಪ್ರಸ್ತುತ ಕಂಪನಿಯು ದೇಶಾದ್ಯಂತ 1,240 ಟಚ್‌ಪಾಯಿಂಟ್‌ಗಳು ಮತ್ತು 212 ಪೂರೈಕೆದಾರರ ಜಾಲವನ್ನು ಹೊಂದಿದೆ. “ಬೈ ಯುವರ್ ಸೈಡ್” ಎಂಬ ತತ್ವದಡಿ ಗ್ರಾಹಕ ಕೇಂದ್ರಿತ ಸೇವೆಯನ್ನು ಮುಂದುವರಿಸುತ್ತಿದೆ.
ಸುಜುಕಿ ಉತ್ಪನ್ನಗಳಲ್ಲಿ ಅಕ್ಸೆಸ್ 125, ಬರ್ಗ್ಮನ್ ಸ್ಟ್ರೀಟ್, ಅವೆನಿಸ್, ಜಿಕ್ಸರ್ ಸರಣಿ ಹಾಗೂ ಹಯಬುಸಾ ಮೊದಲಾದ ಮಾದರಿಗಳು ಪ್ರಮುಖವಾಗಿದ್ದು, ವಿವಿಧ ವಿಭಾಗಗಳಲ್ಲಿ ಕಂಪನಿಯ ಸ್ಥಿರ ಸ್ಥಾನವನ್ನು ಸೂಚಿಸುತ್ತವೆ.
ಇದೇ ವೇಳೆ, ಭಾರತದಲ್ಲಿ ತಯಾರಾದ ಸುಜುಕಿ ದ್ವಿಚಕ್ರ ವಾಹನಗಳು 77 ದೇಶಗಳಿಗೆ ರಫ್ತಾಗುತ್ತಿದ್ದು, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸುವಲ್ಲಿ ಕಂಪನಿ ಪ್ರಮುಖ ಪಾತ್ರ ವಹಿಸುತ್ತಿದೆ.

