ಅಂಜನಾದ್ರಿಯಲ್ಲಿ ಹನುಮನ ಆಶೀರ್ವಾದ ಪಡೆದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್

0
15

ಕೊಪ್ಪಳ : ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಪತ್ನಿಯೊಂದಿಗೆ ಕೊಪ್ಪಳ ಜಿಲ್ಲೆಯ ಪವಿತ್ರ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಹನುಮಂತನ ದರ್ಶನ ಪಡೆದರು.

ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಏರಿ ದೇವಸ್ಥಾನಕ್ಕೆ ತಲುಪಿದ ದ್ರಾವಿಡ್ ದಂಪತಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕುಟುಂಬದ ಕ್ಷೇಮ ಹಾಗೂ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ದೇವಸ್ಥಾನಕ್ಕೆ ಆಗಮಿಸಿದ ವೇಳೆ ಭಕ್ತರು ಹಾಗೂ ಪ್ರವಾಸಿಗರು ಅವರನ್ನು ಕಂಡು ಸಂಭ್ರಮ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಬುಧವಾರ ಅವರು ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಗೆ ಭೇಟಿ ನೀಡಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದಿದ್ದರು. ಅಲ್ಲದೆ ಸಾಸಿವೆಕಾಳು ಗಣೇಶ, ಹೇಮಕೂಟ, ಕೃಷ್ಣ ದೇವಸ್ಥಾನ, ಉಗ್ರ ನರಸಿಂಹ, ಬಡವಿಲಿಂಗ ಸೇರಿದಂತೆ ಹಲವು ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳಿಗೆ ಭೇಟಿ ನೀಡಿದರು.

ಮಧ್ಯಾಹ್ನದ ಬಳಿಕ ಚಕ್ರತೀರ್ಥ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಹಾಗೂ ಅಚ್ಯುತರಾಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ರಾಹುಲ್ ದ್ರಾವಿಡ್ ಅವರ ಈ ಧಾರ್ಮಿಕ ಪ್ರವಾಸ ಭಕ್ತರು ಹಾಗೂ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದು, ದೇವಸ್ಥಾನಗಳಲ್ಲಿ ಅವರೊಂದಿಗೆ ಹಲವರು ಫೋಟೋ ತೆಗೆಸಿಕೊಂಡರು.

LEAVE A REPLY

Please enter your comment!
Please enter your name here