ಜನಗಣತಿ ರಾಷ್ಟ್ರೀಯ ಕರ್ತವ್ಯ: ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಹೈಕೋರ್ಟ್ ಸೂಚನೆ..!

0
24

ಬೆಂಗಳೂರು : ಜನಗಣತಿ ಒಂದು ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದರಲ್ಲಿ ಎಲ್ಲರೂ ಬದ್ಧತೆಯಿಂದ ಪಾಲ್ಗೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ರಜೆಯಲ್ಲಿರುವ ಶಿಕ್ಷಕರನ್ನು ಕೂಡ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಜನಗಣತಿ ಕಾರ್ಯದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಬೆಂಗಳೂರು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಬಿದ್ದಿದೆ. ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದುಂ ಅವರ ಏಕಸದಸ್ಯ ಪೀಠ ಈ ಅರ್ಜಿಯನ್ನು ವಿಚಾರಿಸಿ, ಒಂದು ವಾರದೊಳಗೆ ಎಲ್ಲಾ ಶಿಕ್ಷಕರನ್ನು ಕರ್ತವ್ಯಕ್ಕೆ ಹಿಂದಿರುಗುವಂತೆ ಸೂಚಿಸಿ, ಜನಗಣತಿ ಆಯುಕ್ತರ ಮುಂದೆ ವರದಿ ಮಾಡಬೇಕೆಂದು ಹೇಳಿದೆ. ಈ ಷರತ್ತು ಪಾಲಿಸಿದರೆ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯ್ದೆಯ ಸೆಕ್ಷನ್ 11ರಡಿ ಎಫ್‌ಐಆರ್ ದಾಖಲಿಸುವ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದೆ.

ಜನಗಣತಿ ಪ್ರತಿ 10–11 ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಕಾರ್ಯವಾಗಿದ್ದು, ಮನೆ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಬೇಕು. ಇಂತಹ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರು ಸಹಕಾರ ನೀಡದಿದ್ದರೆ ಸರ್ಕಾರದ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಂದಿನ ವಿಚಾರಣೆಗೆ ಶಾಲೆಯಲ್ಲಿ ಲಭ್ಯವಿರುವ ಶಿಕ್ಷಕರ ಪಟ್ಟಿಯನ್ನು ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

LEAVE A REPLY

Please enter your comment!
Please enter your name here