ಬೆಂಗಳೂರು : ಶಾಲೆ, ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿಗಳು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಅಶ್ಲೀಲ ಹಾಡುಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಶಿಸ್ತಿನ ಅಭಾವದ ಸಾಧ್ಯತೆ ಇದೆ ಅಲ್ಲದೇ ಶಿಕ್ಷಣ ಸಂಸ್ಥೆಗಳ ಗೌರವಕ್ಕೂ ಧಕ್ಕೆಯುಂಟಾಗಲಿದೆ ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಜೀವನ ಮೌಲ್ಯಗಳು, ಶಿಸ್ತು ವಿದ್ಯಾರ್ಥಿಗಳು ಬಾಲ್ಯದಲ್ಲೇ ಅಳವಡಿಸಿಕೊಳ್ಳುತ್ತಾರೆ.
ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಲ್ಲಿ ಅಸಭ್ಯ ಅಶ್ಲೀಲ ಹಾಡುಗಳನ್ನು ಹಾಕಿ ನೃತ್ಯ ಮಾಡಿದ್ರೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮವಾಗಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಸರಕಾರಿ ಶಾಲೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ನಿಷೇಧ ಹೇರಲಾಗಿದೆ.
ಶಾಲಾ ಕಾರ್ಯಕ್ರಮಗಳಲ್ಲಿ ಆಯ್ಕೆ ಮಾಡುವ ಹಾಡುಗಳು ಮೌಲ್ಯಗಳನ್ನು ಎತ್ತಿಹಿಡಿಯುವ, ರಾಷ್ಟ್ರೀಯ ಅಭಿಮಾನವನ್ನು ಮೂಡಿಸುವ ಹಾಗೂ ಸಕಾರಾತ್ಮಕ ಸಾಹಿತ್ಯವಿರುವ ಸಂಗೀತಕ್ಕೆ ಆದ್ಯತೆ ಕೊಡಬೇಕು. ಅಶ್ಲೀಲ ಸಾಹಿತ್ಯಗಳನ್ನು ಹೊಂದಿರುವ ಹಾಡುಗಳು, ದ್ವಂದ್ವಾರ್ಥ ನೀಡುವ ಹಾಡುಗಳು, ಸಮಾಜಕ್ಕೆ ತಪ್ಪು ಸಂದೇಶ ಸಾರುವ ಹಾಡುಗಳಿಗೆ ಮಕ್ಕಳ ನೃತ್ಯ ನಿಷೇಧಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಉಡುಪು ಕೂಡಾ ಸಭ್ಯವಾಗಿರಬೇಕು, ಸಕಾರಾತ್ಮಕ ಸಾಹಿತ್ಯಗಳಿರುವ ಹಾಡು ಬಳಕೆ ಜಾನಪದ, ದೇಶ ಭಕ್ತಿಗೀತೆ, ಪರಿಸರ ಕಾಳಜಿಯ ಗೀತೆಗಳು, ರಾಷ್ಟ್ರಪ್ರೇಮ, ಹಾಗೂ ಸಮಾಜಮುಖಿ ಚಿಂತನೆಯ ಹಾಡುಗಳನ್ನು ಆಯ್ಕೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ನಿಯಮ ಮೀರಿದರೆ ಮುಖ್ಯಶಿಕ್ಷಕರು, ಸಂಬಂಧಿಸಿದ ಶಿಕ್ಷಕರನ್ನೇ ನೇರ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಸಿದ್ದಾರೆ.

