ಸುಳ್ಯ : ಸ್ಕೂಟಿ–ಟ್ಯಾಂಕರ್‌ ಭೀಕರ ಅಪಘಾತ : ಇಬ್ಬರು ಯುವಕರು ಮೃತ..!

0
70

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ–ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಸವಣೂರು ಸಮೀಪದ ಚಾಪಳ್ಳ ತಿರುವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರಾದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೊಳ್ತಮಜಲು ನಿವಾಸಿ ಯಜ್ಞೇಶ್‌ (20) ಹಾಗೂ ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಜಗನ್‌ (21) ಎಂದು ಗುರುತಿಸಲಾಗಿದೆ.

ಇವರು ಆಲಂಕಾರು ಗ್ರಾಮದ ದೇವಾಲಯಕ್ಕೆ ತೆರಳಿ ಸಂಜೆ ಸುಮಾರು 5 ಗಂಟೆ ವೇಳೆಗೆ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಎದುರಿನಿಂದ ಬಂದ ನೀರು ಪೂರೈಕೆ ಟ್ಯಾಂಕರ್‌ಗೆ ಚಾಪಳ್ಳ ತಿರುವಿನಲ್ಲಿ ಢಿಕ್ಕಿ ಹೊಡೆದಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಟ್ಯಾಂಕರ್‌ ಚಾಲಕ ಢಿಕ್ಕಿ ತಪ್ಪಿಸಲು ಎಡಕ್ಕೆ ತಿರುಗಿಸಿದ್ದರೂ, ವಾಹನ ನಿಯಂತ್ರಣ ತಪ್ಪಿ ಸುಮಾರು 90 ಡಿಗ್ರಿ ತಿರುಗಿ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ. ಸ್ಕೂಟಿ ಟ್ಯಾಂಕರ್‌ ಚಕ್ರದ ಅಡಿಗೆ ಸಿಲುಕಿದ ಪರಿಣಾಮ ಇಬ್ಬರು ಸವಾರರು ಅದರಡಿಗೆ ಸಿಲುಕಿದ್ದಾರೆ.

ಯಜ್ಞೇಶ್‌ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಜಗನ್‌ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರ ದೇಹದ ಕೆಲವು ಭಾಗಗಳು ಛಿದ್ರವಾಗಿದ್ದವು ಎಂದು ತಿಳಿದುಬಂದಿದೆ.

ಯಜ್ಞೇಶ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದು, ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ. ಜಗನ್‌ ಪುತ್ತೂರಿನ ಖಾಸಗಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಯಾಗಿದ್ದು, ಇಂಟರ್ನ್‌ಶಿಪ್‌ಗಾಗಿ ವಿದೇಶಕ್ಕೂ ತೆರಳಿ ಬಂದಿದ್ದ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣಾಧಿಕಾರಿ ಈರಯ್ಯ ದೂಂತೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇನ್ನೊಂದು ಬೈಕ್‌ ಸ್ಕಿಡ್‌:
ಅಪಘಾತದ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಇನ್ನೊಂದು ಬೈಕ್‌ ಸವಾರ ತುರ್ತು ಬ್ರೇಕ್‌ ಹಾಕಿದ ಪರಿಣಾಮ ವಾಹನ ಸ್ಕಿಡ್‌ ಆಗಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಾಯಕಾರಿ ತಿರುವು:
ಅಪಘಾತ ಸಂಭವಿಸಿದ ಚಾಪಳ್ಳ ತಿರುವಿನಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ನಡೆದಿವೆ. ಈ ಅಪಾಯಕಾರಿ ತಿರುವನ್ನು ಸರಿಪಡಿಸದಿದ್ದರೆ ಮುಂದೆಯೂ ಇಂತಹ ದುರಂತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here