ಮಂಗಳೂರು: ಗ್ರಾಮೀಣ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಹಳೇ ವಿದ್ಯಾರ್ಥಿ ಸಂಘ (ರಿ.) ಕೊಳಂಬೆ ಇದರ ವತಿಯಿಂದ 7ನೇ ವರ್ಷದ ಹಳ್ಳಿ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿದೆ.
ನವೆಂಬರ್ 29ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಕೊಳಂಬೆ ಶಾಲಾ ವಠಾರದಲ್ಲಿ ಹಳ್ಳಿ ಕ್ರೀಡೋತ್ಸವ ನಡೆಯಲಿದೆ. ಕೊಳಂಬೆ ಗ್ರಾಮದ ವ್ಯಾಪ್ತಿಗೆ ಒಳಪಟ್ಟ ಗ್ರಾಮಸ್ಥರು, ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಹಳ್ಳಿ ಕ್ರೀಡೋತ್ಸವದಲ್ಲಿ ಆಕರ್ಷಕ ನಗದು ಬಹುಮಾನಗಳ ಘೋಷಣೆ
ಕೊಳಂಬೆ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯಲಿರುವ 7ನೇ ವರ್ಷದ ಹಳ್ಳಿ ಕ್ರೀಡೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಶಾಶ್ವತ ಟ್ರೋಫಿಗಳನ್ನು ಘೋಷಿಸಲಾಗಿದೆ.
ಪುರುಷರ ಹಳ್ಳಿ ಓಟ ವಿಭಾಗ:
- ಪ್ರಥಮ: ₹3,333 ನಗದು ಹಾಗೂ ಶಾಶ್ವತ ಟ್ರೋಫಿ
- ದ್ವಿತೀಯ: ₹2,222 ನಗದು ಹಾಗೂ ಶಾಶ್ವತ ಟ್ರೋಫಿ
- ತೃತೀಯ: ₹1,111 ನಗದು ಹಾಗೂ ಶಾಶ್ವತ ಟ್ರೋಫಿ
ಮಹಿಳೆಯರ ಹಳ್ಳಿ ಓಟ ವಿಭಾಗ:
- ಪ್ರಥಮ: ₹2,222 ನಗದು ಹಾಗೂ ಶಾಶ್ವತ ಟ್ರೋಫಿ
- ದ್ವಿತೀಯ: ₹1,111 ನಗದು ಹಾಗೂ ಶಾಶ್ವತ ಟ್ರೋಫಿ
- ತೃತೀಯ: ₹888 ನಗದು ಹಾಗೂ ಶಾಶ್ವತ ಟ್ರೋಫಿ
ಕ್ರಿಕೆಟ್ ಪಂದ್ಯಾಟ – ಹಿರಿಯರ ವಿಭಾಗ:
- ಪ್ರಥಮ: ₹3,333 ನಗದು ಹಾಗೂ ಶಾಶ್ವತ ಟ್ರೋಫಿ
- ದ್ವಿತೀಯ: ₹2,222 ನಗದು ಹಾಗೂ ಶಾಶ್ವತ ಟ್ರೋಫಿ
ಕ್ರಿಕೆಟ್ ಪಂದ್ಯಾಟ – ಕಿರಿಯರ ವಿಭಾಗ:
- ಪ್ರಥಮ: ₹2,222 ನಗದು ಹಾಗೂ ಶಾಶ್ವತ ಟ್ರೋಫಿ
- ದ್ವಿತೀಯ: ₹1,111 ನಗದು ಹಾಗೂ ಶಾಶ್ವತ ಟ್ರೋಫಿ
ಮಕ್ಕಳು, ಯುವಕರು, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು
ಗಂಡು ಮತ್ತು ಹೆಣ್ಣು ಮಕ್ಕಳ ವಿಭಾಗದಲ್ಲಿ ಲಗೋರಿ, ಹಾಲೆ ಎಳೆಯುವುದು, ಒಂಟಿಕಾಲಿನ ಓಟ ಹಾಗೂ ಕಪ್ಪೆ ಓಟ ಸ್ಪರ್ಧೆಗಳು ನಡೆಯಲಿವೆ. 11ರಿಂದ 16 ವರ್ಷದ ಕಿರಿಯರ ವಿಭಾಗದಲ್ಲಿ ಲಗೋರಿ, ಹಗ್ಗಜಗ್ಗಾಟ, ಒಂಟಿಕಾಲಿನ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
17 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಲಗೋರಿ, ಹಗ್ಗಜಗ್ಗಾಟ, ಹಳ್ಳಿ ಓಟ, ಕ್ರಿಕೆಟ್ ಹಾಗೂ ಗುಡ್ಡಗಾಡು ರಿಲೇ (4×400) ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರ ಹಿರಿಯರ ವಿಭಾಗದಲ್ಲಿ ಹಳ್ಳಿ ಓಟ, ಹಗ್ಗಜಗ್ಗಾಟ, ಲಗೋರಿ, ಗೋಣಿಚೀಲ ಓಟ ಹಾಗೂ ಗುಡ್ಡಗಾಡು ರಿಲೇ ಸ್ಪರ್ಧೆಗಳು ಇರಲಿವೆ.
ಇದಲ್ಲದೆ 60 ವರ್ಷ ಮೇಲ್ಪಟ್ಟ ಪುರುಷರು ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೂ ಹಗ್ಗಜಗ್ಗಾಟ ಸೇರಿದಂತೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗೆ ಹಿಡಿಸೂಡಿ ಹೆಣೆಯುವ ಸ್ಪರ್ಧೆಯೂ ನಡೆಯಲಿದೆ.
ಡಿ.5ರಂದು ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಡಿಸೆಂಬರ್ 5ರ ಶನಿವಾರ ಸಂಜೆ 7 ಗಂಟೆಗೆ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಹಳ್ಳಿ ಕ್ರೀಡೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದ ಕೊಳಂಬೆ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಗುವುದು.
ಸಂಜೆ ಗಂಟೆ 6ರಿಂದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ, ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ವೈಭವ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ರಾತ್ರಿ ತುಳು ನಾಟಕ ಪ್ರದರ್ಶನ
ರಾತ್ರಿ 11.30ರಿಂದ ಕೊಳಂಬೆ ಶಾಲಾ ವಠಾರದಲ್ಲಿ ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ವಿಶೇಷ ತುಳು ನಾಟಕ *ಬ್ರಹ್ಮರಕ್ಕಸೆ* ಪ್ರದರ್ಶನಗೊಳ್ಳಲಿದೆ. ಕ್ಷುದ್ರ ಶಕ್ತಿಯೊಂದರ ಭಯಾನಕ ಕಥಾವಸ್ತುವನ್ನು ಆಧರಿಸಿದ ಈ ನಾಟಕವು ಅದ್ದೂರಿ ರಂಗವಿನ್ಯಾಸ ಹಾಗೂ ಹೊಸ ತಂತ್ರಜ್ಞಾನದೊಂದಿಗೆ ತುಳು ರಂಗಭೂಮಿಯಲ್ಲಿ ವಿಶೇಷ ಅನುಭವ ನೀಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಗ್ರಾಮದ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮದಲ್ಲಿ ಕೊಳಂಬೆ ಗ್ರಾಮದ ಸಮಸ್ತ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ.

