ಬೆಳ್ತಂಗಡಿಯಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ಬಯಲು : ಪೊಲೀಸ್ ದಾಳಿಯಲ್ಲಿ ಮೂವರು ಬಂಧನ..!

0
94

ಬೆಳ್ತಂಗಡಿ : ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕ್ಯಾಂಟಿನ್ ಒಳಗೆ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಗರ ಪಂಚಾಯತ್ ವ್ಯಾಪ್ತಿಯ ಕೆ.ಇ.ಬಿ ಕಚೇರಿ ಪಕ್ಕದ ಸರ್ಕಾರಿ ಜಾಗದಲ್ಲಿ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಸುಂದರ್ ಶೆಟ್ಟಿ ಎಂಬವರು “ಪವನ್ ಕ್ಯಾಂಟಿನ್” ಹೆಸರಿನಲ್ಲಿ ಸುಮಾರು 20 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಕ್ಯಾಂಟಿನ್‌ಗೆ ರವಿವಾರ ರಜೆ ಇದ್ದು, ಆ ಸಮಯದಲ್ಲಿ ಕ್ಯಾಂಟಿನ್ ಒಳಭಾಗದಲ್ಲಿ ಬೆಡ್ ರೂಂ ಹಾಗೂ ಶೌಚಾಲಯ ವ್ಯವಸ್ಥೆ ಮಾಡಿಕೊಂಡು ಮಹಿಳೆಯನ್ನು ಕರೆತಂದು ಗಿರಾಕಿಗಳನ್ನು ಸಂಪರ್ಕಿಸಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಮೇ 10ರಂದು ಸಂಜೆ ಸುಮಾರು 5 ಗಂಟೆಗೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬಹಿರಂಗಗೊಂಡಿದೆ. ದಾಳಿಯ ವೇಳೆ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ (55), ನಾವೂರು ನಿವಾಸಿ ಉಸ್ಮಾನ್ (38) ಹಾಗೂ ಕಲ್ಲೇರಿ ನಿವಾಸಿ ಹೈದರ್ (45) ಅವರನ್ನು ಬಂಧಿಸಲಾಗಿದೆ.

ಇದೇ ವೇಳೆ 29 ವರ್ಷದ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಸ್ಥಳದಿಂದ ಮೊಬೈಲ್ ಫೋನ್, ₹5 ಸಾವಿರ ನಗದು ಹಾಗೂ ಗರ್ಭನಿರೋಧಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಡಿವೈಎಸ್ಪಿ ರೋಹಿನಿ ಸಿ.ಕೆ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷಾ ಹಾಗೂ ಸಿಬ್ಬಂದಿ ದಾಳಿ ಕಾರ್ಯಾಚರಣೆ ನಡೆಸಿದರು.

LEAVE A REPLY

Please enter your comment!
Please enter your name here