ವಾಹನ ನಿಲುಗಡೆಗೆ ನಗರಸಭೆ ಜಾಗ ಮೀಸಲಿಡಲು ಒತ್ತಾಯ..!

0
3

ಉಡುಪಿ : ನಗರದಲ್ಲಿ ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಿದ್ದು, ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೆಲ್ಲಿಕಟ್ಟೆಯಲ್ಲಿ ಧೂಮಾವತಿ ದೈವಸ್ಥಾನದ ಬಳಿ ಇರುವ ನಗರಸಭೆಯ ಖಾಲಿ ಜಾಗದಲ್ಲಿ ಶುಲ್ಕ ಸಹಿತ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಉಡುಪಿ ನಾಗರಿಕರ ಕಲ್ಯಾಣ ವೇದಿಕೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ರಾಜಾರಾಮ ಶೆಟ್ಟಿ, ನಗರದ ಹೃದಯ ಭಾಗದಲ್ಲಿರುವ ಸುಮಾರು 1 ಎಕರೆ ವಿಸ್ತೀರ್ಣದ ಈ ಸರ್ಕಾರಿ ಖಾಲಿ ಜಾಗದಲ್ಲಿ ಈ ಹಿಂದೆ ದೈನಂದಿನ ತರಕಾರಿ ಮಾರುಕಟ್ಟೆಯಿತ್ತು. ಪ್ರಸ್ತುತ ಇದನ್ನು ಆದಿಉಡುಪಿ ಎಪಿಎಂಸಿ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 2020ರವರೆಗೆ ದೈನಂದಿನ ಮಾರುಕಟ್ಟೆಗಳು ನಡೆಯುತ್ತಿದ್ದವು. ಪ್ರಸ್ತುತ ನಗರಸಭೆ ಹಳೆ ಕಟ್ಟಡವನ್ನು ಕೆಡವಿದ್ದು, ವಾಣಿಜ್ಯ ಉದ್ದೇಶಗಳಿಗಾಗಿ ಗುತ್ತಿಗೆ ನೀಡಲು ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲು ಹೊರಟಿದೆ. ಪೌರಾಡಳಿತ ಸಂಸ್ಥೆಗಳು ಜನಸೇವೆ ಮಾಡುವ ಬದಲು ಹಣ ಮಾಡುವ ಉದ್ದೇಶ ಹೊಂದಿರಬಾರದು. ಹೀಗಾಗಿ ನಗರಕ್ಕೆ ಅತೀ ಅಗತ್ಯವಾಗಿರುವ ಶುಲ್ಕ ಸಹಿತ ವಾಹನ ನಿಲುಗಡೆ ಪ್ರದೇಶಕ್ಕೆ (ಪೇಯ್ಡ್​ ಪಾರ್ಕಿಂಗ್​) ಜಾಗವನ್ನು ಮೀಸಲಿಡಬೇಕೆಂದು ಆಗ್ರಹಿಸಿದರು.

ಮಂಗಳೂರು, ಕುಂದಾಪುರ ಮತ್ತು ಕಾರ್ಕಳ ಭಾಗಗಳಿಗೆ ಉದ್ಯೋಗಕ್ಕಾಗಿ ತೆರಳುವವರು ತಮ್ಮ ವಾಹನಗಳನ್ನು ದಿನಪೂರ್ತಿ ನಿಲ್ಲಿಸಲು ಸ್ಥಳವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಿರಿಯ ನಾಗರಿಕರು, ಸಣ್ಣ ವ್ಯಾಪಾರಿಗಳು, ಹೂವು-ಹಣ್ಣು ವ್ಯಾಪಾರಿಗಳಿಗೂ ಈ ಸಮಸ್ಯೆ ದೊಡ್ಡ ತಲೆನೋವಾಗಿದೆ. ನಗರದಲ್ಲಿ ವಾಣಿಜ್ಯ ಕಟ್ಟಡದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಸರಿಯಾಗಿ ಜಾರಿಯಾಗಿಲ್ಲ. ಅನೇಕ ಕಟ್ಟಡಗಳಲ್ಲಿ ವಾಹನ ನಿಲುಗಡೆಗಾಗಿ ಮೀಸಲಾಗಿದ್ದ ನೆಲಮಾಳಿಗೆಗಳು ನಂತರ ಅಂಗಡಿಗಳಾಗಿ ಮಾರ್ಪಟ್ಟಿವೆ. ವೇಗವಾಗಿ ಬೆಳೆಯುತ್ತಿರುವ ಉಡುಪಿ ನಗರಕ್ಕೆ ಈಗ ಅಗತ್ಯವಿರುವುದು ಮತ್ತೊಂದು ವಾಣಿಜ್ಯ ಸಂಕೀರ್ಣವಲ್ಲ. ಬದಲಿಗೆ ಸುಸಜ್ಜಿತವಾದ ಪಾರ್ಕಿಂಗ್​ ವ್ಯವಸ್ಥೆ. ಹಾಗಾಗಿ ನೆಲ್ಲಿಕಟ್ಟೆಯಲ್ಲಿರುವ ಸರ್ಕಾರಿ ಜಾಗವನ್ನು ಸಂಪೂರ್ಣ ಪೇಯ್ಡ್​ ಪಾರ್ಕಿಂಗ್​ಗೆ ಮೀಸಲಿಟ್ಟರೆ ನಗರದ ಸಂಚಾರ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ದೊರೆಯಬಹುದು ಎಂದು ತಿಳಿಸಿದರು.

ವೇದಿಕೆ ಗೌರವಾಧ್ಯಕ್ಷ ಶ್ರೀಧರ್​ ಶೇಣವ, ಪದಾಧಿಕಾರಿಗಳಾದ ಸದಾಶಿವ ರಾವ್​, ವಿಶ್ವನಾಥ್​ ಹೆಗ್ಡೆ, ಗೋಪಾಲಕೃಷ್ಣ ಭಟ್​, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here