ಮೂಡುಬಿದಿರೆ: ಬನ್ನಡ್ಕ ಹೆದ್ದಾರಿಯ ಫ್ಲೈಓವರ್ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಕಾರೊಂದು ರಸ್ತೆ ಡೈವರ್ಷನ್ ಕಲ್ಲಿಗೆ ಡಿಕ್ಕಿ ಹೊಡೆದು ಜಖಂಗೊಂಡ ಘಟನೆ ನಡೆದಿದೆ.
ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ, ಕಳೆದ ಹಲವು ತಿಂಗಳಿನಿಂದ ಬನ್ನಡ್ಕ ಭಾಗದಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯಲ್ಲಿ ಸೂಕ್ತ ಎಚ್ಚರಿಕೆ ಫಲಕಗಳು, ಸುರಕ್ಷತಾ ವ್ಯವಸ್ಥೆಗಳು ಮತ್ತು ಸರಿಯಾದ ಮಾರ್ಗದರ್ಶನ ಇಲ್ಲದೇ ಪದೇಪದೆ ರಸ್ತೆ ತಿರುವುಗಳನ್ನು ಬದಲಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದೇ ಸ್ಥಳದಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿ ಸಾವು-ನೋವುಗಳೂ ನಡೆದಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಹೆದ್ದಾರಿ ಪ್ರಾಧಿಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿ, ವಾಹನ ಸವಾರರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

