ಸತತ ಅಪಘಾತಗಳಿಂದ ಆತಂಕ : ಬನ್ನಡ್ಕದಲ್ಲಿ ಸರ್ವಿಸ್ ರಸ್ತೆಗಾಗಿ ಗ್ರಾಮಸ್ಥರ ಒತ್ತಾಯ..!

0
29

ಮೂಡುಬಿದಿರೆ : ರಾಷ್ಟ್ರೀಯ ಹೆದ್ದಾರಿ 169ರ ಬನ್ನಡ್ಕ ಪ್ರದೇಶದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆ ಪಡುಮಾರ್ನಾಡು ಗ್ರಾಮಸ್ಥರು ಸೋಮವಾರ ಸಂಜೆ ತುರ್ತು ಸಭೆ ನಡೆಸಿ ಆತಂಕ ವ್ಯಕ್ತಪಡಿಸಿದರು.

2023ರಿಂದ 2026ರವರೆಗೆ ಈ ಭಾಗದಲ್ಲಿ 15ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಶೇಷವಾಗಿ ಕಳೆದ ಮೂರೇ ದಿನಗಳಲ್ಲಿ 4 ಅಪಘಾತಗಳು ನಡೆದಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ರಸ್ತೆ ದಾಟುವ ವೇಳೆ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಸಭೆಯಲ್ಲಿ ಮಾತನಾಡಿದ ಸೂರಜ್ ಮಾರ್ನಾಡ್, ಸಮಸ್ಯೆಯನ್ನು ತಕ್ಷಣ ಪರಿಷ್ಕರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.

ಈ ಸಮಸ್ಯೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತರಲಾಗಿದ್ದು, ಅವರು ಸ್ಪಂದಿಸಿ ಮಂಗಳವಾರ ಬೆಳಿಗ್ಗೆ 9:30ಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು, ತಹಸಿಲ್ದಾರ್, ಪೊಲೀಸ್ ಇಲಾಖೆ ಹಾಗೂ ಡಿಬಿಎಲ್ ಕಾಂಟ್ರಾಕ್ಟರ್‌ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಬನ್ನಡ್ಕದಿಂದ ಅಲಂಗಾರುವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ನಿತಿನ್ ಕೋಟ್ಯಾನ್, ಸಂತೋಷ್, ಅಕ್ಷಯ್, ಸುಧಾಕರ್ ಆಚಾರ್ಯ, ಸಂತೋಷ್ ಜೈನ್, ಸುರೇಶ್ ಅಂಚನ್, ಪ್ರೀತಮ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here