ಜಮೀನು ಮಾರಿ ಮಗನನ್ನು ಓದಿಸಿದ್ದ ತಂದೆಯ ಕನಸು ಭಗ್ನ;
Rajasthan : ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ‘NEET-UG 2026’ ಪರೀಕ್ಷೆ ರದ್ದತಿ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ದುರ್ಘಟನೆ ರಾಜಸ್ಥಾನದ Sikar ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು Pradeep Mahich (20) ಎಂದು ಗುರುತಿಸಲಾಗಿದೆ. ಇವರು ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ನಿವಾಸಿಯಾಗಿದ್ದರು.
ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ ಪ್ರದೀಪ್, ಪರೀಕ್ಷೆ ರದ್ದಾದ ಸುದ್ದಿ ತಿಳಿದು ತೀವ್ರ ಖಿನ್ನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಬಳಿಕ ಸಿಕಾರ್‌ನ ತನ್ನ ಬಾಡಿಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿಗಳ ಪ್ರಕಾರ, ಇದು ಪ್ರದೀಪ್‌ಗೆ ಮೂರನೇ ಪ್ರಯತ್ನವಾಗಿತ್ತು. ಆತನ ತಂದೆ Rajesh Kumar Meghwal ಸಾಮಾನ್ಯ ಕಾರ್ಮಿಕರಾಗಿದ್ದು, ಮಗ ವೈದ್ಯನಾಗಬೇಕು ಎಂಬ ಕನಸಿನಿಂದ ಸಾಲ ಮಾಡಿದ್ದು ಮಾತ್ರವಲ್ಲದೆ ತಮ್ಮ ಜಮೀನನ್ನೂ ಮಾರಾಟ ಮಾಡಿ ಕೋಚಿಂಗ್ ಶುಲ್ಕ ಭರಿಸಿದ್ದರು.
ಮೇ 3ರಂದು ನಡೆದ ನೀಟ್ ಪರೀಕ್ಷೆಯನ್ನು ಪ್ರದೀಪ್ ಅತ್ಯುತ್ತಮವಾಗಿ ಬರೆದಿದ್ದರಿಂದ, ಈ ಬಾರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಖಚಿತ ಎಂಬ ವಿಶ್ವಾಸ ಕುಟುಂಬದಲ್ಲಿತ್ತು. ಆದರೆ ಪರೀಕ್ಷೆ ರದ್ದಾದ ಸುದ್ದಿ ಆತನನ್ನು ಮಾನಸಿಕವಾಗಿ ಕುಗ್ಗಿಸಿತ್ತು ಎಂದು ತಂದೆ ಪೊಲೀಸರ ಎದುರು ಕಣ್ಣೀರಿಟ್ಟಿದ್ದಾರೆ.
Pradeep Mahich ಸಿಕಾರ್‌ನ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದು, ಇಬ್ಬರು ಸಹೋದರಿಯರೊಂದಿಗೆ ವಾಸವಿದ್ದನು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಹೋದರಿಯ ಸ್ಕಾರ್ಫ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಧಾವಿಸಿದ Sikar Police ಮೃತದೇಹವನ್ನು ವಶಕ್ಕೆ ಪಡೆದು SK Hospital ನಲ್ಲಿ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆದರೆ ಪ್ರಾಥಮಿಕ ತನಿಖೆಯಲ್ಲಿ ಪರೀಕ್ಷೆ ರದ್ದತಿಯಿಂದ ಉಂಟಾದ ತೀವ್ರ ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನ ಮೊಬೈಲ್ ಹಾಗೂ ನೋಟ್‌ಬುಕ್‌ಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

