ರಾಜಸ್ಥಾನ : ತೀವ್ರ ಬಿಸಿಲಿನ ನಡುವೆ ಲಾಕ್ ಆಗಿದ್ದ ಕಾರಿನೊಳಗೆ ಸಿಲುಕಿ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿರುವ ಮನಕಲಕುವ ಘಟನೆ Rajasthan ರಾಜ್ಯದ Alwarನಲ್ಲಿ ನಡೆದಿದೆ.
ಮೃತ ಬಾಲಕಿಯರನ್ನು ಟೀನಾ (8) ಹಾಗೂ ಲಕ್ಷ್ಮಿ (5) ಎಂದು ಗುರುತಿಸಲಾಗಿದೆ. ಇಬ್ಬರೂ ಸಹೋದರಿಯರು ಆಟವಾಡುತ್ತಿದ್ದ ವೇಳೆ ಕಾರಿನೊಳಗೆ ಸಿಲುಕಿಕೊಂಡು ದಾರುಣ ಅಂತ್ಯ ಕಂಡಿದ್ದಾರೆ.
ಬುಧವಾರ ಬೆಳಿಗ್ಗೆ ವೈಶಾಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖುದನ್‌ಪುರಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ತಾಂತ್ರಿಕ ದೋಷದಿಂದಾಗಿ ಸುಮಾರು 10 ದಿನಗಳಿಂದ ಗ್ಯಾರೇಜ್ ಸಮೀಪ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕಿಯರು ಆಟವಾಡಲು ಹೋಗಿದ್ದರು.
ಆದರೆ ಕಾರು ಲಾಕ್ ಆಗಿದ್ದರಿಂದ ಒಳಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದೇ ಇಬ್ಬರೂ ಅದರೊಳಗೆ ಸಿಲುಕಿಕೊಂಡಿದ್ದಾರೆ. ಹೊರಗೆ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕಾರಿನೊಳಗಿನ ತಾಪಮಾನ ಸುಮಾರು 53 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು ಎನ್ನಲಾಗಿದೆ.
ತೀವ್ರ ಬಿಸಿಲಿನ ಪರಿಣಾಮ ಕಾರಿನೊಳಗೆ ಉಸಿರಾಟಕ್ಕೆ ತೊಂದರೆಯಾಗಿ ಇಬ್ಬರು ಬಾಲಕಿಯರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಕುಟುಂಬದ ಆಕ್ರಂದನ
ಮಕ್ಕಳು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕಾರಿನೊಳಗೆ ಇಬ್ಬರೂ ಅಚೇತನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಘಟನೆ ಬಳಿಕ ಪ್ರದೇಶದಲ್ಲಿ ಶೋಕ ಆವರಿಸಿದ್ದು, ಬಿಸಿಲಿನ ಸಮಯದಲ್ಲಿ ವಾಹನಗಳ ಬಳಿ ಮಕ್ಕಳನ್ನು ಒಬ್ಬರೇ ಬಿಡಬಾರದು ಎಂಬ ಎಚ್ಚರಿಕೆ ಮತ್ತೊಮ್ಮೆ ಕೇಳಿಬಂದಿದೆ.

