ಬಿಸಿ ಆಹಾರದ ತಕ್ಷಣ ಐಸ್ ನೀರು ಕುಡಿಯೋದು ಎಷ್ಟು ಅಪಾಯ ಗೊತ್ತಾ?

0
11

ಚೀನಾ: ಬಿಸಿ ಆಹಾರ ಸೇವಿಸಿದ ತಕ್ಷಣ ತಣ್ಣೀರು ಕುಡಿಯುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಬೆಚ್ಚಿಬೀಳಿಸುವ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ. ಬಿಸಿ ಹಾಟ್‌ಪಾಟ್ ತಿಂದ ಮಹಿಳೆಯೊಬ್ಬಳ ಅನ್ನನಾಳದಲ್ಲಿ 8 ಸೆಂಟಿಮೀಟರ್ ಉದ್ದದ ಅಲ್ಸರ್ ಪತ್ತೆಯಾಗಿದ್ದು, ವೈದ್ಯರನ್ನೇ ಅಚ್ಚರಿಗೆ ಗುರಿಮಾಡಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಹುನಾನ್ ಪ್ರಾಂತ್ಯದ ಮಹಿಳೆ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದಾಗ ತುಂಬಾ ಬಿಸಿಯಾದ ಹಾಟ್‌ಪಾಟ್ ಸೇವಿಸಿದ್ದಾಳೆ. ಊಟದ ಬಳಿಕ ಆಕೆಗೆ ಎದೆ ಹಾಗೂ ಗಂಟಲಿನಲ್ಲಿ ತೀವ್ರ ಉರಿಯೂತ ಮತ್ತು ನೋವು ಕಾಣಿಸಿಕೊಂಡಿದೆ.

ನೋವು ಕಡಿಮೆ ಮಾಡಲು ಕುಡಿದ ಐಸ್ ನೀರೇ ಅಪಾಯ!

ನೋವು ತಗ್ಗಿಸಲು ಮಹಿಳೆಗೆ ಐಸ್ ನೀರು ಕುಡಿಸಲಾಗಿದೆ. ಆದರೆ ಇದರಿಂದ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ರಾತ್ರಿಯಿಡೀ ನೋವು ಹೆಚ್ಚಾಗಿದ್ದು, ಮರುದಿನ ಆಕೆಗೆ ನೀರು ಕೂಡ ನುಂಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ತಕ್ಷಣ ಆಸ್ಪತ್ರೆಗೆ ದಾಖಲಿಸಿದ ವೈದ್ಯರು ಎಂಡೋಸ್ಕೋಪಿ ನಡೆಸಿದಾಗ, ಅನ್ನನಾಳದಲ್ಲಿ ಸುಮಾರು 8 ಸೆಂ.ಮೀ ಉದ್ದದ ಅಲ್ಸರ್ ಕಂಡುಬಂದಿದೆ. ಇದು ಆಹಾರ ಕೊಳವೆಯ ಸುಮಾರು ಮೂರನೇ ಒಂದು ಭಾಗದಷ್ಟು ಭಾಗಕ್ಕೆ ಹಾನಿ ಮಾಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

‘ಬಿಸಿ ಆಹಾರ ಬಳಿಕ ತಣ್ಣೀರು ಅಪಾಯಕಾರಿ’

ವೈದ್ಯರ ಪ್ರಕಾರ, ಅನ್ನನಾಳದ ಒಳಪದರವು ಸುಮಾರು 50-60 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನಷ್ಟೇ ಸಹಿಸಬಲ್ಲದು. ಆದರೆ ಹೊಸದಾಗಿ ತಯಾರಿಸಿದ ಹಾಟ್‌ಪಾಟ್ ಆಹಾರಗಳ ತಾಪಮಾನ 80 ರಿಂದ 90 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬಹುದು.

ಇಂತಹ ಬಿಸಿ ಆಹಾರ ಸೇವಿಸಿದ ತಕ್ಷಣ ಐಸ್ ಅಥವಾ ಅತಿ ತಣ್ಣೀರು ಕುಡಿಯುವುದರಿಂದ ಈಗಾಗಲೇ ಸುಟ್ಟಿರುವ ಅಂಗಾಂಶಗಳು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬಿಸಿ ಆಹಾರ ಸೇವನೆಗೆ ವೈದ್ಯರ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಪ್ರಕಾರ, 65 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನದ ಆಹಾರ ಅಥವಾ ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸಬಹುದು ಎಂದು ತಿಳಿಸಲಾಗಿದೆ.

ಚೀನಾದಲ್ಲಿ ಜನಪ್ರಿಯವಾಗಿರುವ ಹಾಟ್‌ಪಾಟ್ ಸಂಸ್ಕೃತಿ ಇದೀಗ ಆರೋಗ್ಯದ ಅಪಾಯಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here