ಗಡಿಪಾರು ಆದೇಶಕ್ಕೆ ಒಳಗಾದ ನರಸಿಂಹ ಮಾಣಿ ಮನೆಗೆ ಅಜಯ್ ದೀಕ್ಷಿತ್ ಶೆಟ್ಟಿ ಭೇಟಿ

0
3


ತಾಯಿ ಮತ್ತು ತಂಗಿಗೆ ಧೈರ್ಯ ತುಂಬಿದ ಅಜಯ್ ದೀಕ್ಷಿತ್ ಶೆಟ್ಟಿ – ನಿಮ್ಮೊಂದಿಗೆ ಇಡೀ ಹಿಂದೂ ಸಮಾಜವಿದೆ ಎಂದು ಅಭಯ

ವಿಟ್ಲ : ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶ ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಜಯ್ ದೀಕ್ಷಿತ್ ಶೆಟ್ಟಿ ಅವರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಮನೆಯಲ್ಲಿದ್ದ ತಾಯಿ ಹಾಗೂ ತಂಗಿಯನ್ನು ಭೇಟಿಯಾಗಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಜಯ್ ದೀಕ್ಷಿತ್ ಶೆಟ್ಟಿ, ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶದ ನೋಟಿಸ್ ನೀಡಲು ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ ಅವರು ಪೊಲೀಸರಿಗೆ ಸಿಗದ ಹಿನ್ನೆಲೆಯಲ್ಲಿ ಮೊನ್ನೆ ಸಂಜೆ ಮಾಣಿ ಪರಿಸರದಲ್ಲಿ ಡಂಗುರ ಸಾರುವ ಮೂಲಕ ಹಾಗೂ ಮೈಕ್‌ನಲ್ಲಿ ಘೋಷಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿರುವ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ನರಸಿಂಹ ಮಾಣಿ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದವರು. ಸಮಾಜದ ಕೆಲಸಗಳಲ್ಲಿ ತೊಡಗಿಸಿಕೊಂಡ ಕಾರಣದಿಂದ ವಿವಿಧ ಪ್ರಕರಣಗಳನ್ನು ಎದುರಿಸುವಂತಾಗಿದೆಯೇ ಹೊರತು, ಅವರು ಯಾವುದೇ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣಕ್ಕೆ ಗಡಿಪಾರು ಆದೇಶಕ್ಕೆ ಒಳಗಾದವರಲ್ಲ ಎಂದು ಮನೆಯವರಿಗೆ ಸಮಾಧಾನಪಡಿಸಿದರು.


ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿದೆ. ಸಮಾಜದ ಪರವಾಗಿ ಧ್ವನಿ ಎತ್ತುವ ಮತ್ತು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರ ವಿರುದ್ಧ ನಿರಂತರ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಗಡಿಪಾರು ಪ್ರಕ್ರಿಯೆಗಳಿಗೆ ಮುಂದಾಗುವುದು ಖಂಡನೀಯ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಯಾವುದೇ ಸಂಘಟನೆಯ ಕಾರ್ಯಕರ್ತರನ್ನು ರಾಜಕೀಯ ಒತ್ತಡಕ್ಕೆ ಮಣಿದು ಗುರಿಯಾಗಿಸುವ ಪ್ರಯತ್ನ ನಡೆಯಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಕಠಿಣ ಸಂದರ್ಭದಲ್ಲಿ ಕುಟುಂಬದವರು ಧೈರ್ಯ ಕಳೆದುಕೊಳ್ಳಬಾರದು. ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮೊಂದಿಗೆ ಇಡೀ ಹಿಂದೂ ಸಮಾಜವಿದೆ. ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಬೇಕು. ನರಸಿಂಹ ಮಾಣಿ ಅವರ ಕುಟುಂಬಕ್ಕೆ ಹಿಂದೂ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ತಾಯಿ ಹಾಗೂ ತಂಗಿಗೆ ಆತ್ಮಸ್ಥೈರ್ಯ ತುಂಬಿದರು.