ಬನ್ನಡ್ಕದಲ್ಲಿ ಸ್ಕೂಟರ್-ಬೈಕ್ ನಡುವೆ ಅಪಘಾತ :ರಸ್ತೆಗೆ ಓಡಿದ ದನಕ್ಕೆ ಕಾರು ಡಿಕ್ಕಿ

0
2


ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಸಮೀಪದ ಕೆಸರುಗದ್ದೆ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ದನವೊಂದು ಮೃತಪಟ್ಟ ಘಟನೆ ನಡೆದಿದೆ.
ಸ್ಕೂಟರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗುವ ಸಂದರ್ಭ ದನವು ಹೆದರಿಕೊಂಡು ರಸ್ತೆಗೆ ಓಡಿಬಂದಿದ್ದು, ಅದೇ ವೇಳೆ ವೇಗವಾಗಿ ಬರುತ್ತಿದ್ದ ಕಾರು ದನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದನ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದು, ಕಾರಿನ ಮುಂಭಾಗವೂ ಜಖಂಗೊಂಡಿದೆ. ಗಾಯಾಳುಗಳಿಗೆ ಸ್ಥಳೀಯರು ಸಹಾಯ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ, ಕೆಸರುಗದ್ದೆ ಹಾಗೂ ಬೆಳುವಾಯಿ ಭಾಗಗಳು ನಿರಂತರವಾಗಿ ಅಪಘಾತ ವಲಯಗಳಾಗಿ ಮಾರ್ಪಡುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ವಾಹನ ಸವಾರರ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಭಾಗದಲ್ಲಿ ಹೆದ್ದಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ವೇಗ ನಿಯಂತ್ರಣ, ಎಚ್ಚರಿಕೆ ಫಲಕಗಳು ಹಾಗೂ ನಿಯಮಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here