ಬೆಂಗಳೂರು : ರಾಜ್ಯದ ರೈತರು ಹಾಗೂ ಭೂಮಿ ಮಾಲೀಕರಿಗೆ ಸಂಬಂಧಿಸಿದ ಪಹಣಿ ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಹಾಗೂ ವೇಗವಾಗಿ ಮಾಡಲು ಕಂದಾಯ ಆಯುಕ್ತಾಲಯ ಮಹತ್ವದ ಆದೇಶ ಹೊರಡಿಸಿದೆ.
Revenue Department Karnataka ವತಿಯಿಂದ ರಾಜ್ಯದ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದ್ದು, ಪಹಣಿಯ ವಿವಿಧ ಕಾಲಂ ತಿದ್ದುಪಡಿಗೆ ಯಾವ ತಂತ್ರಾಂಶ ವಿಭಾಗ ಬಳಸಬೇಕು ಎಂಬ ವಿವರಗಳನ್ನು ಪ್ರಕಟಿಸಲಾಗಿದೆ.
ಇನ್ನುಮುಂದೆ ಭೌತಿಕ ಅರ್ಜಿಗಳನ್ನು ಸ್ವೀಕರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಕೇವಲ ಅಂತರ್ಜಾಲ ತಂತ್ರಾಂಶದ ಮೂಲಕವೇ ದಾಖಲೆ ಪರಿಶೀಲನೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೂಚನೆ ನೀಡಲಾಗಿದೆ.
ಪ್ರಮುಖ ಸೌಲಭ್ಯಗಳು:
- ಹೊಸ ಪಹಣಿ ಸೃಜನೆಗೆ ವಿಶೇಷ ತಂತ್ರಾಂಶದಲ್ಲಿ ಅವಕಾಶ
- ಪಹಣಿ ರದ್ದತಿ ಹಾಗೂ ಮರುಪಡೆಯುವಿಕೆ ವ್ಯವಸ್ಥೆ
- ಮಾಲೀಕರಿಲ್ಲದ ಪಹಣಿ ತಿದ್ದುಪಡಿಗೂ ಅವಕಾಶ
- ತಿದ್ದುಪಡಿ ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಸೌಲಭ್ಯ
- ಬಹು ದಾಖಲೆಗಳನ್ನು ಒಂದೇ ಅರ್ಜಿಯಲ್ಲಿ ಸೇರಿಸಲು ಅವಕಾಶ
ಕಂದಾಯ ಇಲಾಖೆಯ ತಾಂತ್ರಿಕ ವಿಭಾಗದಿಂದ ಈ ಆದೇಶಕ್ಕೆ ಡಿಜಿಟಲ್ ಸಹಿ ಮಾಡಲಾಗಿದ್ದು, ಸಾರ್ವಜನಿಕರ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ತಂತ್ರಾಂಶದ ಮೂಲಕವೇ ಶೀಘ್ರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಹೊಸ ಕ್ರಮದಿಂದ ರೈತರು ಹಾಗೂ ಭೂಮಿ ಮಾಲೀಕರು ಕಚೇರಿಗಳಿಗೆ ಅಲೆದಾಡುವ ತೊಂದರೆ ತಪ್ಪಿ, ಪಹಣಿ ತಿದ್ದುಪಡಿ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕ ಮತ್ತು ಸುಲಭವಾಗಲಿದೆ.

