ಶಿಕ್ಷಣ ತಜ್ಞ ಸಾಹಿತಿ, ಜಾನಪದ ವಿದ್ವಾಂಸ ಪ್ರೊ.ಎ.ಶ್ರೀನಾಥ್ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

0
7

ಬೆಂಗಳೂರು : ಕಳೆದ ಬಾರಿ ಸುವರ್ಣ ಸಂಭ್ರಮವನ್ನಾಚರಿಸಿದ ಅಂತಾರಾಷ್ಟ್ರೀಯ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2026 ಮೇ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ದೀಪ ಬೆಳಗಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಕಾಸರಗೋಡಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಜಾನಪದ ವಿದ್ವಾಂಸ, ಗೊಂಬೆಯಾಟ ಕಲಾವಿದ ಹಾಗೂ ಕೇರಳ ತುಳು ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಎ. ಶ್ರೀನಾಥ ಕಾಸರಗೋಡು ಅವರಿಗೆ ಶಿಕ್ಷಣ, ಸಾಹಿತ್ಯ ಮತ್ತು ಕಲಾಕ್ಷೇತ್ರದ ಸಾಧನೆಗಾಗಿ 2026ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹೆಚ್.ಎಲ್.ಎನ್. ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ, ಖ್ಯಾತ ವಿದ್ವಾಂಸ, ವಿದ್ಯಾ ವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿದ್ದರು. ಸ್ವಾಗತ ಸಮಿತಿಯ ಡಾ. ಕೆ.ಎನ್ ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಸುಮಾ, ವಿ.ನಾಗೇಂದ್ರ, ಸಂಸ್ಥೆಯ ಮಂಗಳೂರು ಪ್ರತಿನಿಧಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ತುಳು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಸೇವೆಗಾಗಿ ಮಂಗಳೂರಿನ ಡಾ.ಸಂಜೀವ ದಂಡಕೇರಿ, ಮಹಿಳಾ ಯಕ್ಷಗಾನದಲ್ಲಿ ಕುಂದಾಪುರದ ಪ್ರೇಮಾ ಕಿಶೋರ್, ಭರತನಾಟ್ಯದಲ್ಲಿ ಪುತ್ತೂರಿನ ರೋಹಿಣಿ ಉದಯ್ ಸೇರಿದಂತೆ ರಾಜ್ಯ,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 72ಮಂದಿ ಹಿರಿಯ ಸಾಧಕರಿಗೆ 2025 – 26 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎಲ್.ಯನ್.ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ.ಬಸವರಾಜು ವಂದಿಸಿದರು. ಸಾರ್ಥವಳ್ಳಿ ನಾರಾಯಣಸ್ವಾಮಿ ಮತ್ತು ಆರ್.ವೆಂಕಟರಾಜು ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಭರತ ನಾಟ್ಯ, ಜಾನಪದ ನೃತ್ಯ, ಸ್ಯಾಕ್ಸೋಫೋನ್, ಬೊಂಬೆ ವೈಭವ, ಚೆಂಡೆ ವಾದನ ಹಾಗೂ ನಾಡಗೀತೆಯೊಂದಿಗೆ ವರ್ಣರಂಜಿತ ‘ಆರ್ಯಭಟ ನೃತ್ಯೋತ್ಸವ’ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here