ಸಂಗಾರೆಡ್ಡಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ, ಬಳಿಕ ಜೆಸಿಬಿ ಮೂಲಕ ಗುಂಡಿ ತೋಡಿ ಶವ ಹೂತಿಟ್ಟಿದ್ದ ಭೀಕರ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಾರಾಯಣಖೇಡ್ ಮಂಡಲದ ಗಂಗಾಪುರ ಗ್ರಾಮದ ನಿವಾಸಿ ಚೆಂಬನುಳ್ಳ ಮುತ್ಯಂ ರೆಡ್ಡಿ (35) ಕೊಲೆಯಾದ ವ್ಯಕ್ತಿ. ಇವರು ಬೋರ್ವೆಲ್ ಮೋಟಾರ್ ರಿಪೇರಿ ಕೆಲಸ ಮಾಡುತ್ತಿದ್ದರು. ಮೃತನ ಪತ್ನಿ ಕಲ್ಪನಾ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು.
ಈ ವೇಳೆ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದ ಗೌನಿ ಪಂಡರಿ ಎಂಬಾತನೊಂದಿಗೆ ಕಲ್ಪನಾಳಿಗೆ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಗಂಡ ಮುತ್ಯಂ ರೆಡ್ಡಿ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಒಂಬತ್ತು ದಿನಗಳ ಹಿಂದೆ ಮುತ್ಯಂ ರೆಡ್ಡಿಯನ್ನು ದಾಬಾಕ್ಕೆ ಕರೆದುಕೊಂಡು ಹೋಗಿ ಮದ್ಯ ಕುಡಿಸಿ ಊಟ ಮಾಡಿಸಿದ್ದಾರೆ. ಬಳಿಕ ಎಲ್ಗೋಯಿ ಗ್ರಾಮದ ಹೊರವಲಯದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಯಾರಿಗೂ ಅನುಮಾನ ಬಾರದಂತೆ ಮಾಡಲು “ತಾತನ ಸಮಾಧಿ ನಿರ್ಮಾಣ” ಎಂಬ ನೆಪದಲ್ಲಿ ಮುಂಚಿತವಾಗಿಯೇ ಜೆಸಿಬಿ ಮೂಲಕ ಗುಂಡಿ ತೋಡಿಸಲಾಗಿತ್ತು. ಹತ್ಯೆಯ ಬಳಿಕ ಅದೇ ಗುಂಡಿಯಲ್ಲಿ ಶವವನ್ನು ಹೂತುಹಾಕಲಾಗಿದೆ.
ಮುತ್ಯಂ ರೆಡ್ಡಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಕಲ್ಪನಾಳ ಮೊಬೈಲ್ ಕಾಲ್ ಡೀಟೇಲ್ಸ್ ಪರಿಶೀಲನೆ ವೇಳೆ ಅನುಮಾನಾಸ್ಪದ ಮಾಹಿತಿ ಪತ್ತೆಯಾಗಿದೆ. ಬಳಿಕ ಪ್ರಿಯಕರ ಪಂಡರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಆರೋಪಿ ಪೊಲೀಸರಿಗೆ ಶವ ಹೂತ ಸ್ಥಳ ತೋರಿಸಿದ್ದು, ಬಳಿಕ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತನಿಗೆ ಐದು ವರ್ಷದ ಮಗಳಿದ್ದು, ಹೆಂಡತಿಯೇ ಗಂಡನ ಹತ್ಯೆ ನಡೆಸಿರುವ ವಿಷಯ ತಿಳಿದು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

