ಅಕ್ರಮ ಸಂಬಂಧ ಶಂಕೆ : ಅಕ್ಕನ ಕತ್ತು ಸೀಳಿ ಕೊಂದ ತಮ್ಮ!

0
116

ಹಾವೇರಿ: ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಸ್ವಂತ ತಮ್ಮನೇ ಅಕ್ಕನನ್ನು ಮಚ್ಚಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.

ಮೌಲಾಲಿ ಗುಡ್ಡ ನಿವಾಸಿ ಸುಮಾ ಶಿವಶಂಕರ್ ವನಹಳ್ಳಿ (29) ಕೊಲೆಯಾದ ಮಹಿಳೆ. ಇವರು ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಿದ್ದರು.

ಪ್ರತಿದಿನದಂತೆ ಕರ್ತವ್ಯದಲ್ಲಿದ್ದ ವೇಳೆ ಬೆಳಗ್ಗೆ ಸುಮಾ ಅವರ ತಮ್ಮ ಸಂಜು ಎಂಬಾತ ಮಚ್ಚು ಹಿಡಿದು ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ್ದಾನೆ. ಬಳಿಕ ಏಕಾಏಕಿ ಅಕ್ಕನ ಮೇಲೆ ದಾಳಿ ನಡೆಸಿ ಕುತ್ತಿಗೆ ಹಾಗೂ ಕೈಗಳಿಗೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ದಾಳಿಯ ತೀವ್ರತೆಗೆ ಸುಮಾ ಅವರ ಕೈ ಭಾಗಶಃ ಕಟ್ ಆಗಿದ್ದು, ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಪರಿಣಾಮ ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾರೆ.

ಮೃತ ಮಹಿಳೆ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಾರ್ವಜನಿಕ ಸ್ಥಳವಾದ ಅಂಗನವಾಡಿಯಲ್ಲೇ ನಡೆದ ಈ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಘಟನಾ ಸ್ಥಳಕ್ಕೆ ಶಿಗ್ಗಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here