ಗ್ರಾಮೀಣ ಪುನರ್ವಸತಿ ಕಾರ್ಯಕರ್ತನ ವಿರುದ್ಧ ಗಂಭೀರ ಆರೋಪ: ಇಲಾಖಾ ತನಿಖೆಗೆ ಒತ್ತಾಯ..!

0
10

ಕುಂದಾಪುರ: ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಶಶಿಧರ್ ಬಿನ್ ರಾಧಾ ದೇವಾಡಿಗ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಇಲಾಖಾ ಮಟ್ಟದ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಗಿದೆ.

ದೂರಿನ ಪ್ರಕಾರ, ಶಶಿಧರ್ ಅವರು ಇಲಾಖೆಯ ಗೌಪ್ಯತೆಯನ್ನು ಕಾಪಾಡದೆ ಸಾರ್ವಜನಿಕ ವ್ಯಕ್ತಿಯ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಕೇಳಿಸಿರುವುದಲ್ಲದೆ, ವಿವಿಧ ದೂರುಗಳನ್ನು ಸಲ್ಲಿಸಿರುವುದರಿಂದ ಇಲಾಖೆಯ ಕಾರ್ಯವೈಖರಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ರಕ್ಷಿತ್ ಕೆರೆಬಾಗಿಲು ಮನ ಕೋಟೇಶ್ವರ ಎಂಬ ಸಾರ್ವಜನಿಕ ವ್ಯಕ್ತಿಯ ಮೂಲಕ ಮಾಹಿತಿ ಹಕ್ಕಿನ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿ ಹಾಗೂ ದೂರುಗಳಿಗೆ ತಮಗೆ ಯಾವುದೇ ಸಂಬಂಧವಿಲ್ಲ. ಶಶಿಧರ್ ಅವರೇ ತಮ್ಮ ಮೂಲಕ ಮಾಹಿತಿಯನ್ನು ಕೇಳಿಸಿರುವುದಾಗಿ ರಕ್ಷಿತ್ ಅವರು ಲಿಖಿತ ಹೇಳಿಕೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಶಶಿಧರ್ ಅವರು ಇಲಾಖೆಯಿಂದ ಸೂಚಿಸಲಾದ ಕಾರ್ಯಗಳನ್ನು ವಿಳಂಬವಾಗಿ ನಿರ್ವಹಿಸಿದ್ದು, ಇಲಾಖಾ ನಿರ್ದೇಶನಗಳನ್ನು ನಿರ್ಲಕ್ಷಿಸಿರುವ ವಿಚಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಲಾಗಿದೆ.

ಬೈಂದೂರು ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಪ್ರಯಾಣ ವೆಚ್ಚದ ಮಾಹಿತಿಯನ್ನೂ ಮಾಹಿತಿ ಹಕ್ಕಿನಡಿ ಸಾರ್ವಜನಿಕ ವ್ಯಕ್ತಿಯಿಂದ ಕೇಳಿಸಿರುವುದು ಇಲಾಖೆಯ ಗೌಪ್ಯತೆ ಹಾಗೂ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಹಿಂದೆ 2024ರ ಡಿಸೆಂಬರ್ ತಿಂಗಳಲ್ಲಿ “ರಾಮ” ಎಂಬ ಹೆಸರಿನಲ್ಲಿ ತಮ್ಮ ಕಾರ್ಯವೈಖರಿ ಕುರಿತು ದೂರು ಸಲ್ಲಿಸಲಾಗಿದ್ದು, ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ವೇಳೆ ತಾವೇ ದೂರು ಸಲ್ಲಿಸಿರುವುದಾಗಿ ಶಶಿಧರ್ ಒಪ್ಪಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಸಿ, ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here