ಮಸ್ಕಾಂ ಬಾಕಿ ಬಿಲ್ ಹಾಗೂ ಕನಿಷ್ಠ ವೇತನ ಏರಿಕೆ ವಿರೋಧಿಸಿ ಸಣ್ಣ ಕೈಗಾರಿಕಾ ಸಂಘದ ಮನವಿ

0
6

ಉಡುಪಿ : ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಮೇ 27ರಂದು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಎರಡು ಪ್ರಮುಖ ತಕರಾರು ಪತ್ರಗಳನ್ನು ಸಲ್ಲಿಸಲಾಯಿತು.

ಮೊದಲನೆಯದಾಗಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದ ಹಿನ್ನೆಲೆಯಲ್ಲಿ ಮಸ್ಕಾಂ ವತಿಯಿಂದ ಕೈಗಾರಿಕೆಗಳಿಗೆ 2025-26ನೇ ಸಾಲಿನ ಬಾಕಿ ಬಿಲ್ ಕಳುಹಿಸಿರುವುದಕ್ಕೆ ಸಂಘವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಬಿಡುಗಡೆ ಮಾಡಬೇಕಿದ್ದ ಸಹಾಯಧನವನ್ನು ಬಿಡುಗಡೆ ಮಾಡದೇ, ಅದರ ಭಾರವನ್ನು ಕೈಗಾರಿಕೆ ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ಹೇರಲಾಗಿದೆ ಎಂದು ಸಂಘ ಆರೋಪಿಸಿದೆ.

ಈ ಹಿಂಬಾಕಿ ಮೊತ್ತವನ್ನು ಕೂಡಲೇ ಹಿಂಪಡೆದು, ಕೈಗಾರಿಕೆಗಳು ಉಪಯೋಗಿಸಿದ ವಿದ್ಯುಚ್ಛಕ್ತಿಯ ದರವನ್ನು ಮಾತ್ರ ವಸೂಲಿ ಮಾಡುವಂತೆ ಮಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇನ್ನೊಂದೆಡೆ, ಕನಿಷ್ಠ ವೇತನವನ್ನು ಏಕಾಏಕಿ 60 ಶೇಕಡಾ ಹೆಚ್ಚಿಸಿರುವುದರಿಂದ ಎಂಎಸ್‌ಎಂಇ ವಲಯದ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ ಉಂಟಾಗಿದೆ ಎಂದು ಸಂಘ ತಿಳಿಸಿದೆ.

ಈಗಾಗಲೇ ಡೀಸೆಲ್ ದರ ಏರಿಕೆ, ಸಾಗಾಟ ವೆಚ್ಚ ಮತ್ತು ಕಚ್ಚಾ ವಸ್ತುಗಳ ಕೊರತೆಯಿಂದ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ಹೆಚ್ಚಿದ ವೇತನದಿಂದ ಕೈಗಾರಿಕೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಅತಿಸಣ್ಣ ಕೈಗಾರಿಕೆಗಳು ತರಬೇತಿ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದು, ವೇತನ ಏರಿಕೆಯಿಂದ ನೇಮಕಾತಿ ಕಡಿಮೆಯಾಗುವ ಸಾಧ್ಯತೆ ಇದ್ದು ನಿರುದ್ಯೋಗ ಪ್ರಮಾಣವೂ ಹೆಚ್ಚಬಹುದು. ಆದ್ದರಿಂದ ಸರ್ಕಾರ ಎಂಎಸ್‌ಎಂಇ ವಲಯದ ಕೈಗಾರಿಕೆಗಳ ನೆರವಿಗೆ ಬರಬೇಕು ಎಂದು ಸಂಘ ಮನವಿಯಲ್ಲಿ ಕಳಕಳಿಯಿಂದ ಕೇಳಿಕೊಂಡಿದೆ.

LEAVE A REPLY

Please enter your comment!
Please enter your name here