ಸೋದೆ ಮಠದ ಪರ್ಯಾಯದಲ್ಲಿ ಸಾವಯವ ಕೃಷಿಗೆ ವಿಶೇಷ ಉತ್ತೇಜನ

0
2

ಉಡುಪಿ : ಕೃಷ್ಣ ಮಠದಲ್ಲಿ 2028ರಿಂದ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯದಲ್ಲಿ ಕೃಷ್ಣ ದೇವರ ಮಹಾನೈವೇದ್ಯಕ್ಕೆ 365 ದಿನ 365 ಬಗೆಯ ದೇಶೀ ತಳಿ ಶುದ್ಧ ಸಾವಯವ ಅಕ್ಕಿ ಬಳಕೆ ಮಾಡಲಾಗುವುದು. ಈ ಮೂಲಕ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿರುವ ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಅಕ್ಕಿ ತಳಿಗಳಿದ್ದವು. ಇದೀಗ ನಶಿಸುವ ಹಂತದಲ್ಲಿದ್ದು, ದೇಶಿ ಅಕ್ಕಿ ತಳಿಗಳನ್ನು ಸಂರಸುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಕೃಷ್ಣನಿಗೆ ನೈವೇದ್ಯಕ್ಕೆ ಅಕ್ಕಿ ನೀಡಿದ ರೈತ ಕುಟುಂಬವನ್ನು ಸನ್ಮಾನಿಸಲಾಗುವುದು. ಈ ಮೂಲಕ ದೇಶಿತಳಿಗಳನ್ನು ಜನರಿಗೆ ಪರಿಚಯಿಸಲಾಗುವುದು ಎಂದರು.

ಭೋಜನಪ್ರಸಾದಕ್ಕೆ ಸಾವಯವ ಅಕ್ಕಿ

ಕೃಷ್ಣ ಮಠದಲ್ಲಿ 2 ವರ್ಷ ಭಕ್ತರಿಗೆ ವಿತರಿಸುವ ಭೋಜನ ಪ್ರಸಾದಕ್ಕೆ ಸಾವಯವ ಅಕ್ಕಿಯನ್ನೇ ಬಳಸುವ ಚಿಂತನೆ ಇದೆ. ಇದಕ್ಕೆ ಯಾವ ತಳಿ ಸೂಕ್ತವಾಗಿದೆ ಎಂಬ ಬಗ್ಗೆ ಕೃಷಿಕರಿಂದ ಸಲಹೆಯನ್ನು ಪಡೆಯಲಾಗುತ್ತಿದೆ. ಇದರೊಂದಿಗೆ ಬೆಲ್ಲ , ಉದ್ದಿನಬೇಳೆ ಸಹಿತ ಸಾವಯವಧಾನ್ಯಗಳಿಂದಲೆ ಅಡುಗೆ ಸಿದ್ಧಪಡಿಸುವ ಯೋಜನೆ ಇದೆ ಎಂದು ಶ್ರೀಗಳು ತಿಳಿಸಿದರು.

ಪುರುಷೋತ್ತಮ ಕೃಷಿ ಪ್ರತಿಷ್ಠಾನದ ವಿಶ್ವಸ್ಥ ಶ್ರೀವತ್ಸ ಮಾತನಾಡಿ, ಶುದ್ಧ ನೈವೇದ್ಯ ಸಮರ್ಪಣಂ ಎಂಬ ಹೆಸರಿನಲ್ಲಿ ದೇಶೀ ತಳಿ ಅಕ್ಕಿ ಸಂರಕ್ಷಣೆ ಅಭಿಯಾನ ಆರಂಭವಾಗಿದ್ದು, ಪ್ರತಿಯೊಂದು ತಳಿಯೂ ವಿಶೇಷ ಔಷಧೀಯ ಗುಣ ಹೊಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 250ಕ್ಕೂ ಅಧಿಕ ಮಂದಿ ರೈತರು ವಿವಿಧ ತಳಿಯ ಭತ್ತದ ಬೀಜಗಳನ್ನು ಪಡೆದುಕೊಂಡು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರು ಶ್ರೀಗಳು ನೀಡಿದ ಭತ್ತದ ತಳಿಯನ್ನು ಬೆಳೆದು ಪರ್ಯಾಯದಲ್ಲಿ 25 ಕೆಜಿ ಅಕ್ಕಿಯನ್ನು ತಂದು ಕೃಷ್ಣನಿಗೆ ಸಮರ್ಪಿಸಲಿದ್ದಾರೆ ಎಂದರು.

ತೀರ್ಥಹಳ್ಳಿ ಕೃಷಿಪರಿವಾರದ ದಿನೇಶ್​, ನಿರ್ದೇಶಕ ಅರುಣ್​ ಉಪಸ್ಥಿತರಿದ್ದರು.

ಬಾಕ್ಸ್​
ನಾಳೆ ಬೊಗಸೆ ಬೀಜ ಪ್ರದಾನ
ಸೋದೆ ವಾದಿರಾಜ ಮಠ ಮತ್ತು ಕೃಷಿ ಪ್ರಯೋಗ ಪರಿವಾರ ಸಂಸ್ಥೆಗಳ ಆಶ್ರಯದಲ್ಲಿ ಮೇ 28ರಂದು ಬೆಳಗ್ಗೆ 10 ಗಂಟೆಗೆ ರಥಬೀದಿ ಸೋದೆ ಮಠದಲ್ಲಿ ಬೊಗಸೆ ಭತ್ತ ಬೀಜ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದ.ಕ., ಉಡುಪಿ, ಶಿವಮೊಗ್ಗ, ಕೊಡಗು, ದಾವಣಗೆರೆ, ಬೆಳಗಾವಿ ಸೇರಿದಂತೆ 10 ಜಿಲ್ಲೆಯ 200 ಮಂದಿ ರೈತರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here