100% ಫಲಿತಾಂಶದ ಹಿಂದೆ ಮುಖ್ಯ ಶಿಕ್ಷಕರ ಶ್ರಮ ಮಹತ್ವದ್ದು: ಡಾ. ಎಚ್.ಎಸ್. ಬಲ್ಲಾಳ್

0
7

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಅತ್ಯುತ್ತಮ ಸಾಧನೆ ದಾಖಲಿಸುತ್ತಿದ್ದು, ಈ ಯಶಸ್ಸಿನ ಹಿಂದೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ ಎಂದು ಡಿ.ಆರ್‌.ಹೆಚ್‌.ಬಳ್ಳಾಲ್‌ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾಭವನದಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಹಾಗೂ 2025-26ನೇ ಸಾಲಿನಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತುಮಕೂರಿನರಾಮಕೃಷ್ಣ ಆಶ್ರಮ, ತುಮಕೂರಿನ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಸೃಜನಶೀಲತೆಯನ್ನು ಬೆಳೆಸುವುದು ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ. ಬದ್ಧತೆ ಮತ್ತು ಪ್ರೀತಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಶ್ರೇಷ್ಠ ಫಲಿತಾಂಶ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ 10 ವಿದ್ಯಾರ್ಥಿಗಳನ್ನು ಹಾಗೂ ಶೇ.100 ಫಲಿತಾಂಶ ದಾಖಲಿಸಿದ 197 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅಶೋಕ್ ಕಾಮತ್,ಮುಂದಿನ ವರ್ಷ ಉಡುಪಿ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮತ್ತಷ್ಟು ಸಾಧನೆ ಮಾಡಲು ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತೀಕ್ ಬಾಯಲ್, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿ, ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನದ ಜೊತೆಗೆ ಮೌಲ್ಯ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದರು. ಯಾವುದೇ ವಿದ್ಯಾರ್ಥಿ ಅನುತ್ತೀರ್ಣತೆಯ ನೋವನ್ನು ಅನುಭವಿಸದಂತೆ ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು ಎಂದರು.

ವೇದಿಕೆಯಲ್ಲಿ ಡಾ. ಶ್ರೀಧರ ಆರ್. ಪೈ ಹಾಗೂ ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಉಪಸ್ಥಿತರಿದ್ದು ಮಾತನಾಡಿದರು.

ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್ ಸಿ. ಸ್ವಾಗತಿಸಿದರು. ಡಯಟ್ ಉಪನ್ಯಾಸಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮವನ್ನು ರಾಜೇಂದ್ರ ಭಟ್ ನಿರೂಪಿಸಿದರು.

LEAVE A REPLY

Please enter your comment!
Please enter your name here