ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯನ್ನು “ಮಂಗಳೂರು ಜಿಲ್ಲೆ” ಎಂದು ಮರುನಾಮಕರಣ ಮಾಡಬೇಕೆಂಬುದು ಕೇಳಿಬಂದಿದೆ. ಆಡಳಿತಾತ್ಮಕವಾಗಿ ಹಾಗೂ ಐತಿಹಾಸಿಕವಾಗಿ “ಮಂಗಳೂರು” ಎಂಬ ಹೆಸರು ಹೆಚ್ಚು ಸೂಕ್ತವಾಗಿದ್ದು, ಜಿಲ್ಲೆಯ ಗುರುತನ್ನು ಇನ್ನಷ್ಟು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಇತಿಹಾಸ ಮತ್ತು ಭಾಷಾ ಅಧ್ಯಯನಗಳ ಪ್ರಕಾರ, “ಮಂಗಳೂರು” ಎಂಬ ಹೆಸರು ತುಳು ಭಾಷೆಯ “ಮಂಗರ” ಎಂಬ ಪದದಿಂದ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ. “ಮಂಗರ” ಎಂದರೆ ನದಿ ದಾಟುವ ಸ್ಥಳ ಎಂಬ ಅರ್ಥವಿದ್ದು, ಈ ಪ್ರದೇಶದ ಭೌಗೋಳಿಕ ವೈಶಿಷ್ಟ್ಯಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.
ತುಳು ಪಾಡ್ದನಗಳಲ್ಲಿಯೂ “ಮಂಗರ” ಪದದ ಉಲ್ಲೇಖ ಕಂಡುಬರುತ್ತದೆ. ಮಂಗಾರಮಾನಿ ದೈವ, ಮಂಗಾರಕರಿಯ ಹಾಗೂ ಮಂಗಾರಗಟ್ಟ ಮುಂತಾದ ಸ್ಥಳನಾಮಗಳು ಮತ್ತು ದೈವಪರಂಪರೆಗಳು ಈ ಪದದ ಐತಿಹಾಸಿಕ ಅಸ್ತಿತ್ವಕ್ಕೆ ಸಾಕ್ಷಿಯಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಅದೇ ರೀತಿ, ನದಿಗಳ ಸಂಗಮ ಮತ್ತು ಸಾಮೀಪ್ಯವನ್ನು ಸೂಚಿಸುವ ತುಳು ಭಾಷೆಯ “ಕುಡ್ಲ” ಪದವೂ ಈ ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತಿನೊಂದಿಗೆ ಸಂಬಂಧ ಹೊಂದಿದೆ. ಮಂಗಳೂರು ನಗರವು ಹಲವು ನದಿಗಳ ಸುತ್ತ ಬೆಳೆದಿರುವುದರಿಂದ “ಮಂಗರ” ಮತ್ತು “ಕುಡ್ಲ” ಎಂಬ ಎರಡೂ ಪದಗಳು ಈ ಭಾಗದ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.
ಹೀಗಾಗಿ, ಜಿಲ್ಲೆಯ ಐತಿಹಾಸಿಕ ಪರಂಪರೆ, ಭಾಷಾ ಹಿನ್ನೆಲೆ ಹಾಗೂ ಆಡಳಿತಾತ್ಮಕ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯನ್ನು “ಮಂಗಳೂರು ಜಿಲ್ಲೆ” ಎಂದು ಮರುನಾಮಕರಣ ಮಾಡುವುದು ನ್ಯಾಯಸಮ್ಮತ ಮತ್ತು ಕಾಲೋಚಿತ ಕ್ರಮವಾಗಲಿದೆ ಎಂಬ ಅಭಿಪ್ರಾಯ ವಿವಿಧ ವಲಯಗಳಿಂದ ವ್ಯಕ್ತವಾಗುತ್ತಿದೆ.

