ಹರೀಶ (ಹೆಸರು ಬದಲಾಗಿಸಲಾಗಿದೆ) ನನ್ನ ಬಾಲ್ಯ ಸ್ನೇಹಿತ. ನನ್ನೂರು ಶೇಣಿಯ ಸರಕಾರಿ ಶಾಲೆಯಲ್ಲಿ ಒಂದರಿಂದ ೩ನೇ ತರಗತಿವರೆಗೆ ನನ್ನ ಸಹಪಾಠಿಯಾಗಿದ್ದ. ಆತನ ವಯಸ್ಸು ಬರೋಬ್ಬರಿ ೫೦ ಆಗಿತ್ತು ಕಳೆದ ವರ್ಷ. ಕಳೆದ ನವಂಬರ್ ಮೊದಲ ವಾರದಲ್ಲಿ ಅಚಾನಕ್ ಆತನ ಫೋನ್ ಬಂದಿತ್ತು. ಆತನ ಹೆಸರು ಮತ್ತು ಮಾತಿನ ವರಸೆಯಿಂದ ಆತನನ್ನು ಗುರುತು ಹಚ್ಚಿದೆ. ಸಣ್ಣ ಸಮಸ್ಯೆ ಬಾಯಿಯೊಳಗೆ ಇದೆ, ಬಂದು ಕಾಣಬಹುದಾ ಎಂದು ಕೇಳಿದ್ದ. ಮರುದಿನವೇ ಆತನಿಗೆ ಬರಲು ಹೇಳಿದ್ದೆ.
ಮರುದಿನ ಮಟ ಮಟ ಮದ್ಯಾಹ್ನ ನನ್ನ ಚೇಂಬರಿಗೆ ಬಂದಿದ್ದ. ಆತ ಬಂದು ಬಾಯಿ ತೆರೆದಾಗಲೇ ನನಗೆ ಅರಿವಾಗಿತ್ತು ಅಪಾಯ ಕಾದಿದೆ ಎಂದು. ಒಳ್ಳೆ ಕಟ್ಟು ಮಸ್ತಾದ ದೇಹದ ಅಜಾನುಬಾಹು ವ್ಯಕ್ತಿತ್ವ ಅವನದ್ದು. ಕೈಗಳ ಮಾಂಸಖಂಡ ಎದ್ದು ಕಾಣುತ್ತಿತ್ತು. ಪರಿಶ್ರಮ ಜೀವಿಯಾಗಿದ್ದ ಕಾರಣ ಆತ ಆರು ಪ್ಯಾಕುಗಳ ಹೊಟ್ಟೆಯನ್ನು ಹೊಂದಿದ್ದ. ಆತನ ತೂಕ ಸುಮಾರು ೬೫ ಕೆಜಿ ಇತ್ತು. ರಕ್ತದೊತ್ತಡ, ಮಧುಮೇಹ ಯಾವುದೂ ಇರಲಿಲ್ಲ.
ಯಾವುದೋ ಕೆಟ್ಟ ಗಳಿಗೆಯಲ್ಲಿ ತಂಬಾಕಿನ ಚಟಕ್ಕೆ ಬಲಿಯಾಗಿದ್ದ. ಸುಮಾರು ೧೦ ವರುಷಗಳ ಕಾಲ ಗುಟ್ಕ ತಿಂದಿದ್ದಾನಂತೆ. ಕಳೆದೊಂದು ವರುಷದಿಂದ ಬಾಯಿ ಉರಿಯಿಂದಾಗಿ ಆತ ಅದಕ್ಕೆ ತಿಲಾಂಜಲಿ ಇಟ್ಟಿದ್ದ. ಆದರೆ ಕಾಲ ಮಿಂಚಿತ್ತು. ತಂಬಾಕು ಸದ್ದಿಲ್ಲದೆ ತನ್ನ ಮನೆ ಹಾಳು ಕೆಲಸವನ್ನು ಮಾಡೇ ಬಿಟ್ಟಿತ್ತು. ಆತನ ಬಾಯಿಯಲ್ಲಿ ಸಣ್ಣದಾದ ಹುಣ್ಣು ಉಂಟಾಗಿತ್ತಂತೆ ಆರು ತಿಂಗಳ ಕೆಳಗೆ. ಮಾಮೂಲು ಹುಣ್ಣು ಎಂದು ಆತ ನಿರ್ಲಕ್ಷ ಮಾಡಿದ. ಅದಕ್ಕೆ ಹಳ್ಳಿ ಮದ್ದು, ಕಷಾಯಕ್ಕೆ ಆತ ಮೊರೆ ಹೋಗಿದ್ದ ಮತ್ತು ಕೆಲಸದ ಒತ್ತಡದ ನಡುವೆ ಸರಿಯಾಗಿ ಚಿಕಿತ್ಸೆ ಪಡೆದಿರಲೇ ಇಲ್ಲ.
ದಿನ ಕಳೆದಂತೆ ಸಣ್ಣ ಹುಣ್ಣು ದೊಡ್ಡದಾಗಿತ್ತು. ಒಂದು ಸಣ್ಣ ಗಡ್ಡೆಯಾಗಿ ಬೆಳೆಯತೊಡಗಿತ್ತು ಆತ ಈಗ ಖಾರ ಪದಾರ್ಥಕ್ಕೆ ತಿಲಾಂಜಲಿ ಇಟ್ಟಿದ್ದ. ಮಸಾಲೆಯುಕ್ತ ಮಾಂಸಹಾರ ತಿನ್ನಲೂ ಆತನಿಗೆ ಆಗುತ್ತಿರಲ್ಲಿಲ್ಲ. ಬಾಯಿಯ ಕೆಳಗಿನ ದವಡೆಯ ಎಡಭಾಗದಲ್ಲಿ ಊದಿಕೊಳ್ಳಲು ಆರಂಭವಾದಾಗ ಆತನಿಗೆ ವೈದ್ಯರ ಬಳಿ ಬರಲೇಬೇಕಾಗಿತ್ತು. ಸಣ್ಣ ಉರಿ, ನೋವು ಮತ್ತು ಸಣ್ಣ ಮಟ್ಟಿನ ರಕ್ತಸ್ರಾವ ಕೂಡ ಆರಂಭವಾಗಿತ್ತು. ನನ್ನ ಬಳಿ ನವೆಂಬರ್ ಮೊದಲ ವಾರ ಬಂದಾಗ ಸುಮಾರು 2×2 cm ನಷ್ಟು ದೊಡ್ಡ ಗಡ್ಡೆ ಬೆಳೆದು ಬಿಟ್ಟಿತ್ತು. ಬಾಲ್ಯ ಸ್ನೇಹಿತ ಹಾಗೂ ಸಹಪಾಠಿ ಎಂಬ ಆತ್ಮೀಯತೆಯಿಂದ ಆತನಿಗೆ ತಕ್ಷಣವೇ ಬಯಾಪ್ಸಿ ಮಾಡಿದ್ದೆ. ದೊಡ್ಡದಾಗಿ ಬೆಳೆದ ಗಡ್ಡೆಯ ಸಣ್ಣ ಮಾಂಸದ ತುಂಡೊಂದನ್ನು ಕತ್ತರಿಸಿ ತಗೆದು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಿದೆ, ಬಯಾಪ್ಸಿ ಮಾಡಲೂ ಆತ ಮೊದಲು ಒಪ್ಪಲೇ ಇಲ್ಲ, ಪ್ರೀತಿಯಿಂದ ಗದರಿಸಿ ವೈದ್ಯನೆಂಬ ನೆಲೆಯಲ್ಲಿ ಅಧಿಕಾರಯುತವಾಗಿ ಹಕ್ಕು ಚಲಾಯಿಸಿ ನಾಳೆಗೆ ಮುಂದೂಡದೆ ಅದೇ ದಿನ ಬಯಾಪ್ಸಿ ಪರೀಕ್ಷೆ ಮಾಡಿದ್ದೆ.
ನನ್ನೂರಿನ ಸಹಪಾಠಿ ಕುಚುಕು ಗೆಳೆಯ ಎಂಬ ಹಿನ್ನಲೆಯಲ್ಲಿ ಫೀಸ್ ಕೂಡ ತೆಗೆದುಕೊಂಡಿರಲಿಲ್ಲ. ಒಂದೇ ವಾರದಲ್ಲಿ ಬಯಾಪ್ಸಿ ರಿಪೋರ್ಟ್ ಬಂದಿತ್ತು. ನಾನೆಣಿಸಿದಂತೆ ಬಾಯಿಯ ಕ್ಯಾನ್ಸರ್ ಎಂದೇ ರಿಪೋರ್ಟ್ ಬಂದಿತ್ತು. ಆತನಿಗೆ ತಕ್ಷಣವೇ ಫೋನಾಯಿಸಿ ಬರಲು ಹೇಳಿದಕ್ಕೆ ಆತ ಈಗ ಸ್ವಲ್ಪ ಬೆದರಿದ್ದ. ಪೋನಿನಲ್ಲಿಯೇ ಸಾಂತ್ವನ ಹೇಳಿ, ಬರಲು ಹೇಳಿದಕ್ಕೆ ಅಂತೂ ಕೊನೆಗೂ ಡಿಸೆಂಬರ್ ಮೊದಲ ವಾರ ಆತ ಮಗದೊಮ್ಮೆ ಕ್ಲಿನಿಕ್‌ಗೆ ಬಂದಿದ್ದ. ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆ. ಸುಮಾರು ಒಂದು ಘಂಟೆಗಳ ಕಾಲ ನನ್ನ ಅಮೂಲ್ಯ ಸಮಯವನ್ನು ಆತನಿಗೆ ನೀಡಿದ್ದೆ. ಆಪ್ತ ಸಮಾಲೋಚನೆ ಮಾಡಿ ಸರ್ಜರಿ ಮಾಡಿಸಲೇಬೇಕಾದ ಅನಿವಾರ್ಯತೆಯನ್ನು ಆತನಿಗೆ ಬಿಡಿಸಿ ಬಿಡಿಸಿ ಹೇಳಿದ್ದೆ. ಆರ್ಥಿಕ ಸಮಸ್ಯೆ ಇದ್ದಲ್ಲಿ ಅದಕ್ಕೂ ವ್ಯವಸ್ಥೆ ಮಾಡೋಣ ಎಂದು ಆಶ್ವಾಸನೆ ನೀಡಿದ್ದೆ. ತಕ್ಷಣವೇ ಸರ್ಜರಿ ಮಾಡಿಸಲೇಬೇಕು ಎಂದು ಹೇಳಿದ್ದೆ.
ಕೇಳದಿದ್ದಾಗ ಮೃದುವಾಗಿ ಗದರಿಸಿ ಹೆದರಿಸಿ ತಿಳಿಹೇಳಿದ್ದೆ. ನಾನೇ ಬರೆದ ಅರಿವು ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕವನ್ನು ಆತನಿಗೆ ಉಚಿತವಾಗಿ ನೀಡಿದ್ದೆ. ಒಂದೇ ವಾರದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಬರುತ್ತೇನೆ ಎಂದು ಆತ ಹೇಳಿದ್ದ. ಆ ವಾರ ಬರಲೇ ಇಲ್ಲ. ನಾನು ಪೋನ್ ಮಾಡುತ್ತಲೇ ಇದ್ದೆ. ಮೊದ ಮೊದಲು ಪೋನ್ ತೆಗೆಯುತ್ತಿದ್ದ. ಆ ಬಳಿಕ ಪೋನ್ ತೆಗೆಯಲೂ ಇಲ್ಲ. ನಾನೂ ಕೆಲಸದ ಒತ್ತಡದಿಂದ ಮರೆತ್ತಿದ್ದೆ. ಕನಿಷ್ಟ ಐವತ್ತು ಬಾರಿ ಪೋನ್ ಮಾಡಿದ್ದೆ. ಕೊನೆಗೆ ಆತ ಹಳ್ಳಿ ಮದ್ದು ಮಾಡುತ್ತಿದ್ದಾನೆ ಎಂಬ ವಿಚಾರ ನನಗೆ ತಿಳಿದು ಬಂದಿತ್ತು. ಹಳ್ಳಿ ಮದ್ದು, ಕಷಾಯ, ತಾಯಿತ, ಹರಕೆ ಇದ್ಯಾವುದಕ್ಕೂ ಕ್ಯಾನ್ಸರ್ ಬಗ್ಗಲ್ಲ ಎಂಬ ಮಾತನ್ನು ಅವನಿಗೆ ನಾನು ಮೊದಲೇ ಸ್ಪಷ್ಟವಾಗಿ ತಿಳಿಹೇಳಿದ್ದೆ. ಆತ ಕೇಳಿಸಿಕೊಂಡಿದ್ದ. ಆದರೆ ಆತ ತಪ್ಪು ದಾರಿ ಹಿಡಿದಿದ್ದ.
ಮೊದಲು ಬಂದಾಗ ಆತನ ಕ್ಯಾನ್ಸರ್ ೨ನೇ ಸ್ಟೇಜ್ ನಲ್ಲಿತ್ತು. ಆಗ ಖಂಡಿತವಾಗಿ ಸರ್ಜರಿಗೆ ಸ್ಪಂದಿಸುವ ಹಂತದಲ್ಲಿತ್ತು. ಕ್ರಮೇಣ ನಾನು ಮರೆತು ಹೋದೆ. ಮೊನ್ನೆ ಎಪ್ರಿಲ್ ತಿಂಗಳ ಕೊನೇ ವಾರ ಚುನಾವನಣೆ ಕರ್ತವ್ಯಕ್ಕೆ ನನ್ನೂರಿಗೆ ಹೋದಾಗ, ಆತನ ಮನೆಯ ಹತ್ತಿರ ಹೋಗಿ ಮನಸ್ಸು ಕೇಳದೆ ಪೋನ್ ಮಾಡಿದೆ. ಆತ ಉತ್ತರಿಸಲೇ ಇಲ್ಲ. ದಿನ ಉರುಳುತಿತ್ತು. ಮೊನ್ನೆ ಮೇ ತಿಂಗಳ ಮೊದಲ ವಾರ ಆತನ ಫೋನಿನಿಂದ ನನಗೆ ಫೋನ್ ಬಂದಾಗ ಆತುರಾತುರವಾಗಿ ಫೋನ್ ಉತ್ತರಿಸಿದ್ದೆ.
ಆದರೆ ಆತನ ಬದಲು ಆತನ ಅಣ್ಣ ಆ ಕಡೆಯಿಂದ ಮಾತನಾಡುತ್ತಿದ್ದ. ತಮ್ಮನ ಆರೋಗ್ಯ ಹದೆಗೆಟ್ಟಿದೆ. ಕಳೆದ ವಾರದಿಂದ ಏನೂ ತಿನ್ನುತ್ತಿಲ್ಲ ಏನು ಮಾಡುವುದು ತೋಚುತ್ತಿಲ್ಲ ಎಂದು ಹೇಳಿದ. ನಾನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ಬರಲು ಹೇಳಿದ್ದೆ. ಅದೇ ರಾತ್ರಿ ಆತ ತನ್ನ ತಮ್ಮನನ್ನು ಆಂಬುಲೆನ್ಸ್ನಲ್ಲಿ ಕರೆದುಕೊಂಡು ಆಸ್ಪತ್ರೆಗೆ ಒಳರೋಗಿಯಾಗಿ ಆಡ್ಮಿಟ್ ಆಗಿದ.್ದ ಆತನ ಆರೋಗ್ಯ ತೀರ ಹದಗೆಟ್ಟಿತ್ತು. ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಮಾತಿಗೂ ಸ್ಪಂದಿಸುತ್ತಿರಲಿಲ್ಲ, ಆತನ ಹೆಸರು ಕೂಗಿದಾಗ ಕಣ್ಣಂಚಿನಿಂದ ಒಂದೆರಡು ಹನಿ ಕಣ್ಣೀರು ಜಾರಿತ್ತು. ಆದು ಪಶ್ಚಾತ್ತಾಪದ ಕಣ್ಣೀರು ಎಂದು ನನಗೆ ಅರಿವಾಗಿತ್ತು.
ಅಂದು ನವೆಂಬರ್‌ನ ಮೊದಲ ವಾರದಲ್ಲಿ ನೋಡಿದ 65 ಕೆಜಿ ತೂಕದ ಅಜಾನುಬಾಹು ವ್ಯಕ್ತಿತ್ವದ ಆತನಿಗೂ, ಇಂದಿನ ಆತನ ಪರಿಸ್ಥಿತಿಗೂ ಅಜಾಗಜಾಂತರ ವ್ಯತ್ಯಾಸ ಇತ್ತು. ಎಡಗಡೆಯ ಮುಖ ಪೂರ್ತಿ ಊದಿಕೊಂಡಿದ್ದು ಗಡ್ಡೆ ದೊಡ್ಡದಾಗಿ ಬಾಯಿಂದ ಹೊರಗೆ ಚಾಚಿತ್ತು. ಅಸಹ್ಯಕರ ವಾಸನೆ ಮತ್ತು ರಕ್ತ ಒಸರಿ ಹೆಪ್ಪುಕಟ್ಟಿತ್ತು. ಉಸಿರಾಡಲು ಆತ ಕಷ್ಟ ಪಡುತ್ತಿದ್ದ. ತಿನ್ನಲೂ ಆಗದೆ ದೇಹದ ತೂಕ ಇಳಿದೇ ಹೋಗಿತ್ತು. ಪಕ್ಕೆಲುಬುಗಳು ಎದ್ದುಕಾಣುತ್ತಿತ್ತು.6 ಪ್ಯಾಕ್‌ಗಳ ಹೊಟ್ಟೆ ಈಗ ಮಾಯಾವಾಗಿ ಹೊಟ್ಟೆ ಬೆನ್ನಿಗಂಟಿತ್ತು. ಆತ ಜೀವಂತ ಅಸ್ಥಿಪಂಜರದಂತಾಗಿದ್ದ. ಕ್ಯಾನ್ಸರ್ ದೇಹದೆಲ್ಲೆಡೆ ಹರಡಿತ್ತು.
ಕುತ್ತಿಗೆ, ಎದೆಗೂಡು, ಯಕೃತ್ತು, ಮೆದುಳು ಹೀಗೆ ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಪಿಸಿ ರುದ್ರ ನರ್ತನ ಆರಂಭಿಸಿ ತಿಂಗಳುಗಳೇ ಕಳೆದಿತ್ತು. ಈಗ ಆತನಿಗೆ ಯಾವು ಚಿಕಿತ್ಸೆಯೂ ನೀಡುವ ಸಾಧ್ಯತೆ ಇರಲಿಲ್ಲ. ಬಾಯಿ ಮತ್ತು ಮೂಗಿಗೆ ಟ್ಯೂಬ್ ಹಾಕಿ ಆಹಾರ ಮತ್ತು ಆಮ್ಲಜನಕ ಮಾತ್ರ ನೀಡಬಹುದಾಗಿತ್ತು. ಇನ್ನು ಜಾಸ್ತಿ ದಿನ ಬದುಕುವ ಸಂಭವ ಇರಲಿಲ್ಲ. ಮಾನವೀಯತೆ ದೃಷ್ಟಿಯಿಂದ ಕೇವಲ ಗ್ಲೂಕೋಸ್ ದ್ರಾವಣ ನೀಡಿದಷ್ಟೇ. ಕೊಳೆತು ಹೋದ ಕ್ಯಾನ್ಸರ್ ಗಡ್ಡೆಯಲ್ಲಿ ಸೋಂಕು ಉಂಟಾಗಿ ಆ ಸೋಂಕು ದೇಹವೆಲ್ಲ ವ್ಯಾಪಿಸಿತ್ತು. ದೇಹ ಜ್ವರದಿಂದ ಕುದಿಯುತ್ತಿತ್ತು. ಒಂದೊಂದು ಉಸಿರಿಗೂ ಆತ ಹರ ಸಾಹಸ ಪಡುತ್ತಿದ್ದ. ಆತ ತನ್ನ ಜೀವನದ ಕೊನೆಯ ಹಂತದಲ್ಲಿ ಬಂದು ನಿಂತಿದ್ದ. ನಾನು ಅಸಹಾಯಕ. ನನ್ನ ತಂಡದ ವೈದ್ಯರು ಕೈ ಚೆಲ್ಲಿದ್ದರು. ನೂರು ವರುಷಗಳ ಕಾಲ ಬದುಕಿ ಬಾಳಬೇಕಿದ್ದ ಜೀವವೊಂದು ತನ್ನ ಕೊನೆಗಳಿಗೆಯನ್ನು ಎಣಿಸುತ್ತಿತ್ತು. ಮರುದಿನ ರಾತ್ರಿ ಹನ್ನೊಂದರ ಹೊತ್ತಿಗೆ ಆತನ ಉಸಿರೂ ನಿಂತು ಹೋಗಿತ್ತು. ಅಲ್ಲಿಗೆ ಒಂದು ಅಮೂಲ್ಯ ಜೀವ ನಷ್ಟವಾಗಿತ್ತು.
ಈ ಸಾವಿಗೆ ನಾನು ನನ್ನ ಸ್ನೇಹಿತನನ್ನು ದೂರುವುದಿಲ್ಲ. ಆತನ ಸುತ್ತಲಿನ ಜನರನ್ನೂ ದೂರುವುದಿಲ್ಲ. ನಾನು ದೂರುವುದಿದ್ದರೆ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ದೂರುತ್ತೇನೆ. ಕ್ಯಾನ್ಸರ್ ಎಂದಾಗಲೇ ಅರ್ಧ ಜೀವ ಹೋದ ವ್ಯಕ್ತಿಗೆ ಚುಚ್ಚು ಕೊಂಕು ಮಾತುಗಳಿಂದ ಮತ್ತಷ್ಟು ಜರ್ಜರಿಸಲೇ ಬಾರದು. ಸಾಂತ್ವನ ಹೇಳುವ ನೆಪದಲ್ಲಿ ಆತನ ಆತ್ಮ ವಿಶ್ವಾಸಕ್ಕೆ ಪೆಟ್ಟು ನಿಡಲೇ ಬಾರದು. ನಿಮಗೇನಾದರೂ ಸಹಾಯ ಮಾಡುವ ಇಚ್ಚೆ ಇದ್ದಲ್ಲಿ ಆರ್ಥಿಕ ಸಹಾಯ ನೀಡಿ ಸರಿಯಾದ ವೈದ್ಯರ ಬಳಿ ಕರೆದುಕೊಂಡು ಹೋಗಿ ಅಷ್ಟೆ. ಈಗ ಕ್ಯಾನ್ಸರ್‌ಗೆ ಚಿಕಿತ್ಸೆ ಇದೆ. ಕ್ಯಾನ್ಸರ್ ಬಂದರೂ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದರೆ, ಅವರು ಸಮಾಜದ ಮುಖ್ಯ ವಾಹಿನಿಗೆ ಸೇರಬಹುದು ಎಂಬ ಸತ್ಯ ಸಮಾಜಕ್ಕೆ ಹೋಗಲೇಬೇಕು. ಈ ಸಾವಿಗೆ ಎಲ್ಲರೂ ಹೊಣೆಗಾರರೇ. ಆತನಿಗೆ ಹಳ್ಳಿ ಮದ್ದು ನೀಡಿದ ಮತ್ತು ಹಳ್ಳಿ ಮದ್ದು ನೀಡಲು ಪ್ರೇರೆಪಿಸಿದವರೂ ಪಾಲುದಾರರೇ.
ಈಗ ಚಿಕಿತ್ಸೆ ಕ್ಯಾನ್ಸರ್‌ಗಿಂತ ಹೆಚ್ಚು ನಮ್ಮ ಸಮಾಜಕ್ಕೆ ಮತ್ತು ಜನರಿಗೆ ಚಿಕಿತ್ಸೆ ಅಗತ್ಯವಿದೆ. ಕ್ಯಾನ್ಸರನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ನಮ್ಮ ಸುತ್ತಲಿನ ಜನರಿಗೆ, ಸಮಾಜದ ಕೊಂಕು ನುಡಿಗಳಿಗೆ ಚಿಕಿತ್ಸೆ ಮೊದಲು ನೀಡಬೇಕು ಆತನ ಸಾವಿನಲ್ಲಿ ನನ್ನ ಪಾಲು ಇದೆ. ಒಬ್ಬ ವೈದ್ಯನಾಗಿ ನಾನು ಆತನ ಸರ್ಜರಿಗೆ ಮನವೊಲಿಸುವಲ್ಲಿ ವಿಫಲನಾಗಿದ್ದೆ. ಇನ್ನೊಂದು ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಹರೀಶನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಎಲ್ಲರೂ ಆತ್ಮ ವಿಮರ್ಷೆ ಮಾಡಿಕೊಳ್ಳಲೇ ಬೇಕು. ಇನ್ನೊಬ್ಬ ಹಳ್ಳಿ ಮುಗ್ಧ ಹೈದ ಕ್ಯಾನ್ಸರ್‌ಗೆ ಬಲಿಯಾಗಲೇ ಬಾರದು ಅದುವೇ ಹರೀಶನಿಗೆ ನೀಡುವ ಬಹು ದೊಡ್ಡ ಶ್ರದ್ಧಾಂಜಲಿ.
ಜೈ ಹಿಂದ್
ಡಾ|| ಮುರಳಿ ಮೋಹನ್ ಚೂಂತಾರು

