ಮಣಿಪಾಲದ ರೌಡಿಶೀಟರ್ ವಿರುದ್ಧ ಗೂಂಡಾ ಕಾಯ್ದೆ ಜಾರಿ..!

0
30

ಉಡುಪಿ : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ಅಪರಾಧಿಗಳ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಕಠಿಣ ಕ್ರಮ ಮುಂದುವರಿಸಿದ್ದು, ಮಣಿಪಾಲ ಪೊಲೀಸ್ ಠಾಣಾ ಸರಹದ್ದಿನ ರೌಡಿ ಆಸಾಮಿ ಗಣೇಶ್ (32) ಎಂಬಾತನ ವಿರುದ್ಧ ಇದೀಗ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲಾಗಿದೆ.

80 ಬಡಗಬೆಟ್ಟು ಗ್ರಾಮದ ನೇತಾಜಿನಗರದ ಗಣೇಶ್ ನಿರಂತರವಾಗಿ ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿರುವ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪುರಸ್ಕರಿಸಿದ ಉಡುಪಿ ಜಿಲ್ಲಾಧಿಕಾರಿ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಹಲವು ಕ್ರಿಮಿನಲ್ ಪ್ರಕರಣ

ಬಂಧಿತ ಗಣೇಶ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಮಾರಣಾಂತಿಕ ಹಲ್ಲೆ, ಅಕ್ರಮ ಕೂಟ ರಚನೆ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕಳ್ಳತನ ಸೇರಿದಂತೆ ಹಲವು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 3 ಪ್ರಕರಣಗಳಲ್ಲಿ ಆತ ಖುಲಾಸೆಗೊಂಡಿದ್ದು, 4 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಉಳಿದ 2 ಪ್ರಕರಣಗಳು ಪ್ರಸ್ತುತ ಪೊಲೀಸ್ ತನಿಖೆ ಹಂತದಲ್ಲಿವೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ಆತನನ್ನು ಕಲಬುರ್ಗಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಿ ನ್ಯಾಯಾಂಗ ಬಂಧನದಲ್ಲಿರಿಸಲು ಕ್ರಮ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here