ಬೆಂಗಳೂರು: ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಡಿ ಟಿ ಶ್ರೀನಿವಾಸ್ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಪ್ರವರ್ಗ-1ರ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರವರ್ಗ-1ರ ಒಕ್ಕೂಟದ ಕಾರ್ಯದರ್ಶಿ ಎಸ್ ಚಂದ್ರಶೇಖರ್ ಚಿತ್ರದುರ್ಗ, ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಮತ್ತು ವಿವಿಧ ಸಮುದಾಯಗಳಿಗೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸದಾ ಮುಂಚೂಣಿಯಲ್ಲಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಡಿ.ಟಿ. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು.
ಡಿ.ಟಿ. ಶ್ರೀನಿವಾಸ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಹಲವು ದಶಕಗಳಿಂದ ಸಂಘಟನೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅವರು ಹಿಂದುಳಿದ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಸಮುದಾಯಗಳ ಸಮಸ್ಯೆಗಳನ್ನು ಸರ್ಕಾರ ಮತ್ತು ಪಕ್ಷದ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಶ್ರೀನಿವಾಸ್ ಅವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರವರ್ಗ-1ಕ್ಕೆ ಸೇರಿದ ಅನೇಕ ಸಮುದಾಯಗಳು ರಾಜಕೀಯವಾಗಿ ಪ್ರಭಾವಿಯಾಗಿಲ್ಲ. ಇಂತಹ ಸಮುದಾಯಗಳಿಗೆ ಸರ್ಕಾರದಲ್ಲಿ ಧ್ವನಿಯಾಗುವ ನಾಯಕತ್ವದ ಅಗತ್ಯವಿದೆ. ಆ ನಿಟ್ಟಿನಲ್ಲಿ ಡಿ.ಟಿ. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಿದರೆ ಈ ಸಮುದಾಯಗಳ ನಿರೀಕ್ಷೆಗೆ ಸ್ಪಂದಿಸಿದಂತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ತತ್ವವನ್ನು ತನ್ನ ರಾಜಕೀಯ ಧ್ಯೇಯವಾಗಿ ಘೋಷಿಸಿಕೊಂಡಿದೆ. ಅಹಿಂದ ವರ್ಗಗಳಿಗೆ ಅಧಿಕಾರದಲ್ಲಿ ಪಾಲು ನೀಡುವ ಮೂಲಕ ತನ್ನ ಬದ್ಧತೆಯನ್ನು ಹಲವಾರು ಬಾರಿ ಪ್ರದರ್ಶಿಸಿದೆ. ಡಿ.ಟಿ. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಸಾಮಾಜಿಕ ನ್ಯಾಯದ ಸಂದೇಶ ಮತ್ತಷ್ಟು ಬಲವಾಗಿ ತಲುಪಲಿದೆ. ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಸಮುದಾಯಗಳ ನಡುವೆ ಹೊಂದಿರುವ ಪ್ರಭಾವದ ದೃಷ್ಟಿಯಿಂದಲೂ ಅವರು ಸಚಿವ ಸ್ಥಾನಕ್ಕೆ ಅರ್ಹರು. ವಿಧಾನ ಪರಿಷತ್ ಸದಸ್ಯರಾಗಿ ಸದನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಆಡಳಿತದ ಅರಿವು ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಇರುವ ಕಾಳಜಿಯು ಅವರನ್ನು ಸಮರ್ಥ ಸಚಿವರಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಎಸ್ ಚಂದ್ರಶೇಖರ್ ಚಿತ್ರದುರ್ಗ ಹೇಳಿದರು.
ಒಕ್ಕೂಟದ ಉಪಾಧ್ಯಕ್ಷ ಮಣ್ಣೂರು ನಾಗರಾಜು ಮಾತನಾಡಿ, ಡಿ.ಟಿ. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಈ ಸಮುದಾಯಗಳ ಆಶೋತ್ತರಗಳಿಗೆ ನ್ಯಾಯ ದೊರಕುವ ಜೊತೆಗೆ ಸರ್ಕಾರ ಮತ್ತು ಸಮುದಾಯಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಹಿಂದುಳಿದ ವರ್ಗಗಳ ಹಿತಾಸಕ್ತಿಗಾಗಿ ನಿರಂತರವಾಗಿ ದುಡಿಯುತ್ತಿರುವ, ಸಂಘಟನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿ.ಟಿ. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವುದು ಕೇವಲ ಒಬ್ಬ ವ್ಯಕ್ತಿಗೆ ಸಿಗುವ ಗೌರವವಲ್ಲ. ಅದು ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಮುದಾಯಗಳ ರಾಜಕೀಯ ಸಬಲೀಕರಣಕ್ಕೆ ದೊರೆಯುವ ಮಾನ್ಯತೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಮಣ್ಣೂರು ನಾಗರಾಜು ಪ್ರಧಾನ ಕಾರ್ಯದರ್ಶಿ ಲೋಕೆಶಪ್ಪ, ಪದಾಧಿಕಾರಿಗಳಾದ ಜೋಗಮಲ್, ಬಿ ಉಮಾಶಂಕರ್, ಗೋಪಾಲಕೃಷ್ಣ, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು.

