ದೆಹಲಿಯ ಹೋಟೆಲ್​ನಲ್ಲಿ ಅಗ್ನಿ ಅವಘಡ, 20 ಮಂದಿ ಸಾವು

0
53

ನವದೆಹಲಿ: ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ‘ಮಿಕಾಸಾ ಇನ್’ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಕೆಲವರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಬೆಳಗ್ಗೆ 8.50 ರ ಸುಮಾರಿಗೆ ಹೋಟೆಲ್‌ನ ನೆಲಮಾಳಿಗೆಯಿಂದ ಬೆಂಕಿ ಕಾಣಿಸಿಕೊಂಡ ತಕ್ಷಣ, ದೆಹಲಿ ಅಗ್ನಿಶಾಮಕ ಸೇವೆಗಳು (DFS) ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ಅಪಾಯದ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಎರಡು ವಾಟರ್ ಎಂಜಿನ್‌ಗಳು, ಎರಡು ಬೌಸರ್‌ಗಳು ಮತ್ತು ಒಂದು ತ್ವರಿತ ಪ್ರತಿಕ್ರಿಯೆ ವಾಹನ (QRV) ಸೇರಿದಂತೆ ಆಧುನಿಕ ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿದವು. ಕಿರಿದಾದ ಗಲ್ಲಿಗಳ ನಡುವೆಯೂ ಸಿಬ್ಬಂದಿಗಳು ಅತ್ಯಂತ ಶ್ರಮವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಐದು ಅಂತಸ್ತಿನ ಈ ಹೋಟೆಲ್‌ನಲ್ಲಿ ಸುಮಾರು 25 ಕೊಠಡಿಗಳಿದ್ದು, ಅವಘಡದ ಸಮಯದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಇದ್ದರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳಾಗಿದ್ದರು. ಬೆಂಕಿ ಹರಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಹೋಟೆಲ್ ಸಿಬ್ಬಂದಿ ಅಗ್ನಿಶಾಮಕ ದಳದೊಂದಿಗೆ ಕೈಜೋಡಿಸಿ, ಸಿಲುಕಿಕೊಂಡಿದ್ದ ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಹರಸಾಹಸ ಪಟ್ಟರು. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೆಸ್ಟೋರೆಂಟ್ ಸಿಬ್ಬಂದಿಯ ಜಾಣ್ಮೆ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಅಡುಗೆಯವರಾಗಿ ಕೆಲಸ ಮಾಡುವ ಕೇಸರ್ ಸಿಂಗ್ ಅವರು ಬೆಳಗ್ಗೆ ವಿದ್ಯುತ್ ಸ್ಟೌವ್ ಆನ್ ಮಾಡಲು ಹೋದಾಗ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅವರು ಗಾಬರಿಯಾಗದೆ ತಕ್ಷಣವೇ ತಮ್ಮ ಸಹಾಯಕರು ಹಾಗೂ ಹೋಟೆಲ್‌ನ ಇತರೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಎಲ್ಲರೂ ಬೇಗನೆ ಹೊರಹೋಗಲು ದಾರಿ ಮಾಡಿಕೊಟ್ಟರು.

ಅನಿರೀಕ್ಷಿತವಾಗಿ ಸಂಭವಿಸಿದ ಈ ಅವಘಡದಲ್ಲಿ ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡಿರುವುದು ತೀವ್ರ ಬೇಸರದ ಸಂಗತಿಯಾದರೂ, ದೆಹಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಹೌಜ್ ರಾಣಿಯ ಯುವಕರ ಸಕಾಲಿಕ ಸಾಹಸದಿಂದಾಗಿ ಉಳಿದ ಜನರುಪಾರಾಗಿರುವುದು ಸಮಾಧಾನದ ಸಂಗತಿಯಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಆರ್ಥಿಕ ನೆರವು ನೀಡುವುದಾಗಿ ಪಿಎಂಒ ಘೋಷಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಹತ್ತಿರದ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here