5300 ವರ್ಷಗಳ ಹಳೆಯ ಐಸ್ ಮಮ್ಮಿಯಲ್ಲಿ ಜೀವದ ಕುರುಹು? ವಿಜ್ಞಾನಿಗಳಲ್ಲಿ ಆತಂಕ

0
27

ವೈದ್ಯಕೀಯ ಮತ್ತು ಪುರಾತತ್ವ ಶಾಸ್ತ್ರದ ಇತಿಹಾಸದಲ್ಲೇ ಅತ್ಯಂತ ಆಸಕ್ತಿದಾಯಕ ಹಾಗೂ ರೋಮಾಂಚನಕಾರಿ ಸಂಶೋಧನೆಯೊಂದು ಈಗ ಜಗತ್ತಿನಾದ್ಯಂತ ಬೆಳಕಿಗೆ ಬಂದಿದೆ. 1991 ರಲ್ಲಿ ಇಟಲಿ-ಆಸ್ಟ್ರಿಯಾ ಗಡಿಯ ಆಲ್ಪ್ಸ್ ಪರ್ವತಗಳಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದ ಪ್ರಾಚೀನ ಮಾನವನ ದೇಹವೊಂದು ಪತ್ತೆಯಾಗಿತ್ತು. ವಿಜ್ಞಾನಿಗಳು ಆತನಿಗೆ ಓಟ್ಜಿ ದಿ ಐಸ್‌ಮ್ಯಾನ್ (Ötzi the Iceman) ಎಂದು ನಾಮಕರಣ ಮಾಡಿದ್ದರು. ತಾಮ್ರ ಯುಗಕ್ಕೆ (Copper Age) ಸೇರಿದ ಈ ಮಂಜಿನ ಮನುಷ್ಯ ಸುಮಾರು 5,300 ವರ್ಷಗಳ ಹಿಂದೆ ಮರಣ ಹೊಂದಿದ್ದನೆಂದು ಸಂಶೋಧಕರು ದೃಢಪಡಿಸಿದ್ದರು. ಇಲ್ಲಿಯವರೆಗೆ ಓಟ್ಜಿಯನ್ನು ಕೇವಲ ಹೆಪ್ಪುಗಟ್ಟಿದ ಕಾಲದ ಕ್ಯಾಪ್ಸುಲ್ (Frozen Time-capsule) ಎಂದಷ್ಟೇ ಭಾವಿಸಲಾಗಿತ್ತು.

ಯಾವುದಾದರೊಂದು ವಸ್ತು, ಜೀವ ಅಥವಾ ಇಡೀ ವಾತಾವರಣವು ನೈಸರ್ಗಿಕವಾಗಿ ತೀವ್ರವಾದ ಮಂಜಿನಲ್ಲಿ (Ice) ಹೆಪ್ಪುಗಟ್ಟಿ, ಸಾವಿರಾರು ವರ್ಷಗಳ ಕಾಲ ಯಾವುದೇ ಬದಲಾವಣೆ ಇಲ್ಲದೆ, ಹಾಳಾಗದೆ ಅದೇ ಸ್ಥಿತಿಯಲ್ಲಿ ಸುರಕ್ಷಿತವಾಗಿ ಉಳಿದುಕೊಂಡರೆ ಅದನ್ನು “ಹೆಪ್ಪುಗಟ್ಟಿದ ಕಾಲದ ಕ್ಯಾಪ್ಸುಲ್” ಎಂದು ಕರೆಯಲಾಗುತ್ತದೆ.

ಆದರೆ, ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಅಧ್ಯಯನದ ಪ್ರಕಾರ, ಈ ಐಸ್‌ಮ್ಯಾನ್ ದೇಹದ ಮೇಲಿರುವ ಸೂಕ್ಷ್ಮಜೀವಿಗಳ ವ್ಯವಸ್ಥೆಯು (Microbiome) ಕೇವಲ ನಿಶ್ಚಲವಾಗಿಲ್ಲ, ಅದು ಇಂದಿಗೂ ಸಜೀವವಾಗಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ (Evolving) ಒಳಗಾಗುತ್ತಿದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ಇಟಲಿಯ Eurac Research ಸಂಸ್ಥೆಗೆ ಸೇರಿದ ಮೈಕ್ರೋಬಯಾಲಜಿಸ್ಟ್ ಮೊಹಮ್ಮದ್ ಸರ್ಹಾನ್ ನೇತೃತ್ವದ ತಂಡವು ಓಟ್ಜಿಯ ದೇಹ, ಚರ್ಮ ಮತ್ತು ಆತನ ಹೊಟ್ಟೆಯೊಳಗಿನ ಅವಶೇಷಗಳಿಂದ ಸಂಗ್ರಹಿಸಿದ ಮಾದರಿಗಳ ಮೇಲೆ ತಳೀಯ ವಿಶ್ಲೇಷಣೆ (Genetic Analysis) ನಡೆಸಿದೆ. ಈ ಅದ್ಭುತ ಸಂಶೋಧನೆಯಲ್ಲಿ ಓಟ್ಜಿಯ ದೇಹದ ಮೇಲೆ ಸಾವಿರಾರು ವರ್ಷಗಳ ಹಳೆಯ ಪ್ರಾಚೀನ ಸೂಕ್ಷ್ಮಜೀವಿಗಳ ಜೊತೆಗೆ, ಆಧುನಿಕ ಮಾಲಿನ್ಯಕಾರಕಗಳು ಸಹಜೀವನ ನಡೆಸುತ್ತಿರುವುದು ತಿಳಿದುಬಂದಿದೆ. ಐಸ್‌ಮ್ಯಾನ್ ಕೇವಲ ಒಂದು ಜೀವರಹಿತ ಪಳೆಯುಳಿಕೆಯಲ್ಲ, ಅದು ಶೀತ ವಾತಾವರಣದಲ್ಲಿ ಬದುಕುವ ಸೂಕ್ಷ್ಮಜೀವಿಗಳ ಒಂದು ಸಜೀವ ಮತ್ತು ಸಂಕೀರ್ಣ ಪರಿಸರ ವ್ಯವಸ್ಥೆಯಾಗಿದೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಅಧ್ಯಯನದಲ್ಲಿ ಅತ್ಯಂತ ವಿಚಿತ್ರವಾದ ಅಂಶವೆಂದರೆ, ಓಟ್ಜಿಯ ಚರ್ಮದ ಮೇಲೆ ಪತ್ತೆಯಾದ ನಾಲ್ಕು ರೀತಿಯ ಶೀತ-ಅನುಕೂಲ ಈಸ್ಟ್ (Psychrophilic Yeasts) ಪ್ರಭೇದಗಳು ಇಂದಿಗೂ ಸಕ್ರಿಯವಾಗಿವೆ (Metabolically Active). ಪ್ರಸ್ತುತ ಓಟ್ಜಿ ಮಮ್ಮಿಯನ್ನು ಇಟಲಿಯ ‘ಸೌತ್ ಟೈರೋಲ್ ಮ್ಯೂಸಿಯಂ ಆಫ್ ಆರ್ಕಿಯಾಲಜಿ’ಯಲ್ಲಿ ಮೈನಸ್ 6 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಶೇಕಡ 100 ರಷ್ಟು ತೇವಾಂಶ ಹೊಂದಿರುವ ವಿಶೇಷ ಚೇಂಬರ್‌ನಲ್ಲಿ ಸಂರಕ್ಷಿಸಲಾಗಿದೆ. ಆದರೆ 2010 ಮತ್ತು 2019 ರ ನಡುವೆ ಸಂಗ್ರಹಿಸಲಾದ ಮಾದರಿಗಳನ್ನು ಹೋಲಿಸಿ ನೋಡಿದಾಗ, ‘ಗ್ಲೇಸಿಯೋಜೈಮಾ’ (Glaciozyma) ಎಂಬ ವಿಶೇಷ ಈಸ್ಟ್ ಪ್ರಭೇದವು ಕಳೆದ ಒಂಬತ್ತು ವರ್ಷಗಳಲ್ಲಿ ಆ ತೀವ್ರವಾದ ಚಳಿಯಲ್ಲೂ ನಿಧಾನವಾಗಿ ವೃದ್ಧಿಯಾಗಿ, ಒಟ್ಟು ಸೂಕ್ಷ್ಮಜೀವಿಗಳ ಸಮೂಹವನ್ನೇ ಆಕ್ರಮಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಮೂಲಗ:ೊಂದ ತಿಳಿದುಬಂದಿದೆ.

ಮಮ್ಮಿಗಳ ಸಂರಕ್ಷಣೆಗೆ ಹೊಸ ಸವಾಲು

ಈ ಸೂಕ್ಷ್ಮಜೀವಿಗಳು ಸಾವಿರಾರು ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಓಟ್ಜಿಯೊಂದಿಗೇ ಉಳಿದುಕೊಂಡಿವೆ ಅಥವಾ ಮಂಜು ಕರಗಿದ ಸಮಯದಲ್ಲಿ ಪುನರುಜ್ಜೀವನಗೊಂಡಿರಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಅಷ್ಟೇ ಅಲ್ಲದೆ, ಓಟ್ಜಿಯ ದೇಹವನ್ನು ಶಿಲೀಂಧ್ರಗಳಿಂದ (Fungi) ರಕ್ಷಿಸಲು ಮ್ಯೂಸಿಯಂನಲ್ಲಿ ಬಳಸಲಾದ ಕೆಲವು ರಾಸಾಯನಿಕಗಳನ್ನೇ ಈ ಸೂಕ್ಷ್ಮಜೀವಿಗಳು ತಮ್ಮ ಆಹಾರವನ್ನಾಗಿ ಮಾಡಿಕೊಂಡು ಬದುಕುತ್ತಿರುವುದನ್ನು ಗುರುತಿಸಲಾಗಿದೆ. ಈ ಬೆಳವಣಿಗೆಯು ಓಟ್ಜಿ ಮಮ್ಮಿಯ ದೀರ್ಘಕಾಲೀನ ಸಂರಕ್ಷಣೆಗೆ (Long-term Conservation) ದೊಡ್ಡ ಆತಂಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಇಂತಹ ಪ್ರಾಚೀನ ಅವಶೇಷಗಳನ್ನು ಮತ್ತು ಮಮ್ಮಿಗಳನ್ನು ಕಾಪಾಡಿಕೊಳ್ಳಲು ಸಂಪೂರ್ಣ ಹೊಸ ಪದ್ಧತಿಗಳ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here