ಗುಬ್ಬಿ- ತುಮಕೂರು :- ಸುಳ್ಯದ ಸಾಂಸ್ಕೃತಿಕ ಮಣ್ಣಿನಲ್ಲಿ ಜನಿಸಿ, ಮೂಡಬಿದಿರೆಯನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡು ಕಲಾ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸುತ್ತಿರುವ ಅಪರೂಪದ ಬಹುಮುಖ ಪ್ರತಿಭೆ.
ಗಾಯನ, ಭರತನಾಟ್ಯ, ರಂಗಭೂಮಿ ಕಲಾವಿದೆ ಹಾಗೂ ಪ್ರಸಿದ್ಧ ಕಲಾ ಸಂಘಟಕಿಯಾದ ಶ್ರೀಮತಿ ಸುಮನಾ ಪ್ರಸಾದ್ ಅವರಿಗೆ ಈ ವರ್ಷದ ಪ್ರತಿಷ್ಠಿತ “ವಿಕಾಸ ಕಲಾ ಸಂಘಟನಾ ಭೂಷಣ – 2026” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ವಿಕಾಸ ಸಮಾನಮನಸ್ಕ ಮಾಧ್ಯಮ ಮಿತ್ರರ ವೇದಿಕೆ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿಯ ಶ್ರೀ ಚಿದಾನಂದ ಆಶ್ರಮದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ (ಮೇ 24) ಆಯೋಜಿಸಲಾಗಿದ್ದ ‘ವಿಕಾಸ ಸಂಭ್ರಮ-2026’ ಸಾಂಸ್ಕೃತಿಕ ಉತ್ಸವದ ಸುಸಂದರ್ಭದಲ್ಲಿ ರಾಜ್ಯಮಟ್ಟದ ಈ ಗೌರವಪೂರ್ವಕ ಬಿರುದನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸಾಧಕಿಯ ಸಾಧನೆಯನ್ನು ಪತ್ರಕರ್ತ ಮಂದಾರ ರಾಜೇಶ್ ಭಟ್ ವಿಕಾಸ ಸಂಸ್ಥೆಯ ಗಮನಕ್ಕೆ ತಂದಿದ್ದರು.
ನೃತ್ಯ-ಗಾಯನ-ರಂಗಭೂಮಿಯ ತ್ರಿವೇಣಿ ಸಂಗಮಕ್ಕೆ ಸಂದ ಪುರಸ್ಕಾರ
ಶ್ರೀ ಚಿದಾನಂದ ಆಶ್ರಮದ ದಿವ್ಯ ಸನ್ನಿಧಿಯಲ್ಲಿ ನಡೆದ ಈ ಸಮಾರಂಭದಲ್ಲಿ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ಕ್ಷೇತ್ರಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಸಹಸ್ರಾರು ವೇದಿಕೆಗಳಲ್ಲಿ ತಮ್ಮ ನವಿರಾದ ಗಾಯನ ಹಾಗೂ ಆಕರ್ಷಕ ನೃತ್ಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿರುವ ಸುಮನಾ ಪ್ರಸಾದ್ ಅವರ ಸಾಂಸ್ಕೃತಿಕ ಬದ್ಧತೆಯನ್ನು ನಾಡು ಮುಕ್ತಕಂಠದಿಂದ ಶ್ಲಾಘಿಸುವಂತಾಯಿತು
ರಂಗಭೂಮಿಯ ಅಭಿನಯದಲ್ಲಿ ಜೀವಂತಿಕೆ ತುಂಬುವ ಕಲೆ ಕರಗತ ಮಾಡಿಕೊಂಡಿರುವ ಅವರು, ತಮ್ಮದೇ ನೇತೃತ್ವದ “ಆದಿ ಕಲ್ಚರಲ್ ಅಕಾಡೆಮಿ” ಮೂಲಕ ಹೊಸ ತಲೆಮಾರಿಗೆ ಕಲಾ ಸಂಸ್ಕಾರ ನೀಡುತ್ತಾ ದಕ್ಷ ಕಲಾ ಸಂಘಟಕಿಯಾಗಿ ಹೊರಹೊಮ್ಮಿರುವುದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
ಇತ್ತೀಚೆಗಷ್ಟೇ ಅವರ ಸುಮಧುರ ಕಂಠಸಿರಿಗೆ ‘ಪುನೀತ ಗಾನರತ್ನ-2025’ ಪ್ರಶಸ್ತಿ ಸಂದ ಬೆನ್ನಲ್ಲೇ, ಈಗ ಒಲಿದು ಬಂದಿರುವ ‘ಕಲಾ ಸಂಘಟನಾ ಭೂಷಣ’ ಪ್ರಶಸ್ತಿಯು ಅವರ ಬಹುಮುಖ ಸಾಧನೆಗೆ ಮುಡಿಗೇರಿದ ಮತ್ತೊಂದು ಗರಿಷ್ಠ ಗರಿಯಾಗಿದೆ.
”ಶ್ರೀಮತಿ ಸುಮನಾ ಪ್ರಸಾದ್ ಹಾಗೂ ಅವರ ಕಲಾ ಕುಟುಂಬದ ಕಲಾ ಪಯಣ ನಿರಂತರವಾಗಿರಲಿ, ಭಗವಂತನು ಅವರಿಗೆ ಆಯುಷ್ಯ, ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ” ಎಂದು ಬಂಧುಗಳು ಸ್ನೇಹಿತರು ಶಿಷ್ಯ ವೃಂದ ಹಾಗೂ ಅಭಿಮಾನಿಗಳು ಹಾರೈಸಿದ್ದಾರೆ
”ಕಲೆ ಎನ್ನುವುದು ಕೇವಲ ವೈಯಕ್ತಿಕ ಪ್ರದರ್ಶನವಲ್ಲ; ಅದು ಮುಂದಿನ ತಲೆಮಾರಿಗೆ ದಾಟಿಸಬೇಕಾದ ಸಂಸ್ಕಾರ. ಸಾಂಸ್ಕೃತಿಕ ಬದ್ಧತೆಯೊಂದಿಗೆ ಕಲಾ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಕಲೆಯ ನಿಜವಾದ ವಿಕಾಸ ಸಾಧ್ಯ. ನಿರಂತರ ಸಾಧನೆ, ಕಠಿಣ ಪರಿಶ್ರಮ ಮತ್ತು ಕಲಿಕೆಯ ಮನೋಭಾವವಿದ್ದರೆ ಯುವ ಕಲಾವಿದರು ಯಾವುದೇ ಎತ್ತರವನ್ನು ತಲುಪಬಹುದು ಎಂಬುದಕ್ಕೆ ಶ್ರೀಮತಿ ಸುಮನಾ ಪ್ರಸಾದ್ ಅವರ ಸುದೀರ್ಘ ಕಲಾ ಪಯಣವೇ ನಿದರ್ಶನ.”
ವರದಿ:- ಮಂದಾರ ರಾಜೇಶ್ ಭಟ್

