ಉಡುಪಿ : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ Malpe Beach ಇದೀಗ ಸ್ವಚ್ಛತೆ ಮತ್ತು ಮೂಲಸೌಕರ್ಯ ಕೊರತೆಯಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಬೀಚ್ ಹಾಗೂ ಅದರ ಸುತ್ತಮುತ್ತ ಕಸದ ರಾಶಿ ತುಂಬಿಕೊಂಡಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮುಂದೆ ಜಿಲ್ಲೆಯ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಮಲ್ಪೆ ಬೀಚ್‌ನಲ್ಲಿ ಸಮರ್ಪಕ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳು ಹಾಗೂ ಇತರೆ ಕಸಗಳು ಎಲ್ಲೆಡೆ ಹರಡಿಕೊಂಡಿವೆ. ವಿಶೇಷವಾಗಿ ಮಲ್ಪೆ ಸೀ ವಾಕ್ ಪ್ರದೇಶದಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದು, ಪ್ರವಾಸಿಗರಿಗೆ ಅಸಮಾಧಾನ ಉಂಟುಮಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸೀ ವಾಕ್‌ನ ಎರಡೂ ಬದಿಗಳಲ್ಲಿ ಅಳವಡಿಸಲಾಗಿದ್ದ ಗ್ರಾನೈಟ್ ಕಲ್ಲುಗಳು ಹಾಳಾಗಿದ್ದು, ಹಲವು ಕಡೆ ಕಿತ್ತು ಹೋಗಿವೆ. ಅಲ್ಲದೆ ಒಳಭಾಗದಲ್ಲಿನ ಇಂಟರ್‌ಲಾಕ್ ಅಳವಡಿಕೆಯೂ ಕುಸಿದು ಹೋಗಿದ್ದು, ತುರ್ತು ದುರಸ್ತಿ ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದರ ಜೊತೆಗೆ, ಸೀ ವಾಕ್ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯ ಕೊರತೆಯೂ ಕಂಡುಬರುತ್ತಿದೆ. ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಅಸಾಮಾಜಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಮದ್ಯಪಾನಿಗಳ ಹಾವಳಿ ಹೆಚ್ಚಿರುವುದರಿಂದ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ.
ಮಲ್ಪೆ ಬೀಚ್‌ನಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುತ್ತಿದ್ದರೂ, ಅದಕ್ಕೆ ತಕ್ಕ ಮಟ್ಟಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬೀಚ್‌ನ ಸ್ವಚ್ಛತೆ, ಭದ್ರತೆ, ಮಕ್ಕಳ ಆಟದ ಪ್ರದೇಶಗಳ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರ ಕೀಳಂಜೆ ಅವರು ಮಾತನಾಡಿ, ಮಲ್ಪೆ ಬೀಚ್ ಹಾಗೂ ಸೀ ವಾಕ್ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಸ್ವಚ್ಛ ಮತ್ತು ಸುಸಜ್ಜಿತ ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂದು ಸಂಬಂಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

