ಮಂಗಳೂರು : ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳ ವಾರ್ಷಿಕ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸಿದೆ. ಈ ನಿರ್ಧಾರದಿಂದ ದೇಶದ ಕೋಟ್ಯಂತರ ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ.
ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಉಜ್ವಲ ಯೋಜನೆ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆ 4ರಿಂದ 5 ಸಿಲಿಂಡರ್‌ಗಳಷ್ಟೇ ಇರುವುದರಿಂದ ಸಬ್ಸಿಡಿ ಕೋಟಾವನ್ನು ಮರುನಿಗದಿಪಡಿಸಲಾಗಿದೆ. ಯೋಜನೆ ಆರಂಭವಾದ 2016ರಲ್ಲಿ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳ ಸೌಲಭ್ಯವಿದ್ದು, ನಂತರ ಅದನ್ನು 9ಕ್ಕೆ ಇಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಕಡಿತಗೊಳಿಸಿ 4 ಸಿಲಿಂಡರ್‌ಗಳಿಗೆ ಸೀಮಿತಗೊಳಿಸಲಾಗಿದೆ.
ಇತ್ತೀಚೆಗೆ ಗೃಹಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ₹29 ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ₹942ಕ್ಕೆ ತಲುಪಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹300 ಡಿಬಿಟಿ ಸಬ್ಸಿಡಿ ಮುಂದುವರಿಯಲಿದ್ದು, ಮೊದಲ ನಾಲ್ಕು ಸಿಲಿಂಡರ್‌ಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ನಂತರದ ಸಿಲಿಂಡರ್‌ಗಳಿಗೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿ LPG ದರ ಏರಿಕೆ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಹಾಗೂ ತೈಲ ಕಂಪನಿಗಳ ನಷ್ಟದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ ಈ ಕ್ರಮವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ.

