ಕೆಲಸ ಮಾಡುತ್ತಿದ್ದ ಕ್ಷಣದಲ್ಲೇ ಕಾದಿತ್ತು ಸಾವು ! ಉಕ್ಕಿನ ಲ್ಯಾಡಲ್ ಸ್ಫೋಟಕ್ಕೆ 8 ಕಾರ್ಮಿಕರ ಬಲಿ

0
14

ವಿಶಾಖಪಟ್ಟಣಂ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಎಂಟು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಆತಂಕ ಸೃಷ್ಟಿಸಿದೆ. ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ (Ladle) ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಕಂಟಿನ್ಯೂಯಸ್ ಕ್ಯಾಸ್ಟಿಂಗ್ ಯಂತ್ರದ ಕಾರ್ಯಾಚರಣೆ ವೇಳೆ 22 ಲ್ಯಾಡಲ್‌ಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೊಂದು ಲ್ಯಾಡಲ್ ಜೋಡಿಸುವ ಸಂದರ್ಭದಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಲ್ಯಾಡಲ್‌ನಲ್ಲಿದ್ದ ಉರಿಯುವ ಲೋಹ ಸುತ್ತಮುತ್ತ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಅಲ್ಲಿದ್ದ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಲೋಹದ ಮಟ್ಟವನ್ನು ನಿಯಂತ್ರಿಸುವ ಸ್ಲೈಡ್ ಗೇಟ್ ವ್ಯವಸ್ಥೆಯ ತಾಂತ್ರಿಕ ವೈಫಲ್ಯ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದಿಂದ ಕ್ರೇನ್ ಸೇರಿದಂತೆ ಹಲವು ಯಂತ್ರೋಪಕರಣಗಳಿಗೂ ಹಾನಿಯಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಹೆಚ್‌ಡಿಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಈ ದುರಂತದ ನಿಖರ ಕಾರಣ ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಕಾರ್ಮಿಕರ ಸುರಕ್ಷತಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಮೃತ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here