ಉಡುಪಿ : ಬುದ್ಧಿವಂತರ ಜಿಲ್ಲೆಯೆಂದು ರಾಜ್ಯದಾದ್ಯಂತ ಖ್ಯಾತಿ ಪಡೆದಿರುವ ಉಡುಪಿ ನಗರದ ಹೃದಯಭಾಗದಲ್ಲಿರುವ ಸರ್ವಿಸ್ ಹಾಗೂ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ ಇಂದು ನಿರ್ಲಕ್ಷ್ಯದ ಸಂಕೇತವಾಗಿ ಪರಿಣಮಿಸಿದೆ. ನಗರಸಭಾ ವ್ಯಾಪ್ತಿಯಲ್ಲೇ ಇರುವ ಈ ಪ್ರಮುಖ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬಂದಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಸುತ್ತಮುತ್ತ ಕಸದ ರಾಶಿಗಳು ತುಂಬಿಕೊಂಡಿದ್ದು, ತ್ಯಾಜ್ಯಗಳಿಂದ ದುರ್ವಾಸನೆ ಬೀರುತ್ತಿದೆ. ಮೇಲ್ಛಾವಣಿಗೆ ಅಳವಡಿಸಲಾಗಿದ್ದ ರೂಫಿಂಗ್ ಶೀಟ್‌ಗಳು ಬಹುತೇಕ ಹಾಳಾಗಿದ್ದು, ಮಳೆಗಾಲದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ನೆಲದ ಕಾಂಕ್ರೀಟ್ ಸಂಪೂರ್ಣ ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿರುವುದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಸಂಚರಿಸುವುದೂ ಕಷ್ಟಕರವಾಗಿದೆ.

ಪ್ರತಿದಿನ ಸಾವಿರಾರು ಮಂದಿ ಬಳಸುವ ಈ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಪ್ರಶ್ನೆಯೂ ಉದ್ಭವಿಸಿದೆ. ಸಮರ್ಪಕ ಸಿಸಿ ಕ್ಯಾಮೆರಾಗಳ ಕೊರತೆ, ರಾತ್ರಿ ವೇಳೆಯ ಬೆಳಕಿನ ಅಭಾವ ಹಾಗೂ ಶೌಚಾಲಯಗಳಲ್ಲಿ ಸಮರ್ಪಕ ಲೈಟ್ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರ ಆರೋಪದಂತೆ, ಮಧ್ಯರಾತ್ರಿ ಬಳಿಕ ಬಸ್ ನಿಲ್ದಾಣವು ಮದ್ಯಪಾನಿಗಳು, ಧೂಮಪಾನಿಗಳು ಹಾಗೂ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗುವವರ ತಾಣವಾಗಿ ಮಾರ್ಪಡುತ್ತಿದೆ. ಕೆಲವರು ಅಲ್ಲಿಯೇ ರಾತ್ರಿ ತಂಗಿ ಬೆಳಗಿನ ನಿತ್ಯಕರ್ಮಗಳನ್ನು ನಡೆಸುತ್ತಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಉಡುಪಿಗೆ ಆಗಮಿಸುವ ಪ್ರವಾಸಿಗರು ಬಸ್ ನಿಲ್ದಾಣದ ಈ ದುಸ್ಥಿತಿಯನ್ನು ನೋಡಿ ಅಪಹಾಸ್ಯ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹಿಸುವ ನಗರಸಭೆಯು ಬಸ್ ನಿಲ್ದಾಣದ ಅಭಿವೃದ್ಧಿಯತ್ತ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಮಾತನಾಡಿ, ಉಡುಪಿ ನಗರಸಭೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಕೂಡಲೇ ಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸುಸಜ್ಜಿತ ಮೇಲ್ಛಾವಣಿ, ಸ್ವಚ್ಛ ಪರಿಸರ, ಸುರಕ್ಷತಾ ವ್ಯವಸ್ಥೆ, ಶೌಚಾಲಯಗಳ ಸುಧಾರಣೆ ಹಾಗೂ ಸಿಸಿ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಬಸ್ ನಿಲ್ದಾಣವನ್ನು ಮಾದರಿ ಕೇಂದ್ರವನ್ನಾಗಿ ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

