ಹಾವಂಜೆ : ಸಾರ್ವಜನಿಕ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿರುವ ಉಡುಪಿ ಜಿಲ್ಲೆಯ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಂಜೆ ಅವರ ಹೋರಾಟಕ್ಕೆ ಫಲ ಸಿಕ್ಕಿದ್ದು, ಹಾವಂಜೆ ಗ್ರಾಮದ ಬ್ಯಾಂಕ್ ಆಫ್ ಬರೋಡ ಎದುರಿನ ಹಳೆಯ ಬಸ್ ನಿಲ್ದಾಣದ ನವೀಕರಣ ಕಾರ್ಯಕ್ಕೆ ಉದ್ಯಮಿಯೊಬ್ಬರು ಮುಂದಾಗಿದ್ದಾರೆ.
ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಲಗೇರಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಎದುರಿನ ಬಸ್ ನಿಲ್ದಾಣವು ಹಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿತ್ತು. ನಾಲ್ಕು ಪಿಲ್ಲರ್‌ಗಳೂ ಕುಸಿಯುವ ಹಂತಕ್ಕೆ ತಲುಪಿದ್ದು, ಮೇಲ್ಛಾವಣಿ ಸಂಪೂರ್ಣ ಹಾಳಾಗಿತ್ತು. ಮಳೆ ಹಾಗೂ ಗಾಳಿ ಬೀಸುವ ಸಂದರ್ಭಗಳಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿತ್ತು.
ಈ ಸಮಸ್ಯೆಯನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಪತ್ರಿಕೆಗಳ ಮೂಲಕ ವರದಿ ಪ್ರಕಟಿಸಿ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಈ ಹಿಂದೆ ಬಸ್ ನಿಲ್ದಾಣ ನಿರ್ಮಿಸಿದ್ದ ಬ್ಯಾಂಕ್ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದಾಗ್ಯೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ ಗಂಭೀರವಾಗಿತ್ತು.
ಇದೀಗ ಉಪ್ಪೂರಿನ ಹೆಸರಾಂತ ಉದ್ಯಮಿ, ಕೊಡಗೈ ದಾನಿ ರಾಯಲ್ ರತ್ನಾಕರ್ ಶೆಟ್ಟಿ ಅವರು ದಿವಂಗತ ಡಾ. ರಾಘವೇಂದ್ರ ಭಟ್ ಆರೂರು ಅವರ ಸ್ಮರಣಾರ್ಥವಾಗಿ ಬಸ್ ನಿಲ್ದಾಣದ ನವೀಕರಣಕ್ಕೆ ಮುಂದಾಗಿದ್ದಾರೆ. ಈಗಿರುವ ಅಡಿಪಾಯವನ್ನು ಉಳಿಸಿಕೊಂಡು, ಹೊಸದಾಗಿ ನಾಲ್ಕು ಕಬ್ಬಿಣದ ಪಿಲ್ಲರ್‌ಗಳು ಹಾಗೂ ರೂಫಿಂಗ್ ಶೀಟ್ ಅಳವಡಿಸಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡುವ ಕಾರ್ಯ ಆರಂಭಗೊಂಡಿದೆ.
ಈ ಬೆಳವಣಿಗೆ ಬಸ್‌ಗಾಗಿ ಕಾಯುವ ಪ್ರಯಾಣಿಕರಲ್ಲಿ ಸಂತಸ ಮೂಡಿಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಉದ್ಯಮಿ ಮುಂದೆ ಬಂದಿರುವುದನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ, “ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಸ್ ನಿಲ್ದಾಣ ನವೀಕರಣಕ್ಕೆ ಮುಂದಾದ ರಾಯಲ್ ರತ್ನಾಕರ್ ಶೆಟ್ಟಿ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಅವರ ಕುಟುಂಬಕ್ಕೆ ದೇವರು ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಸಮೃದ್ಧಿ ಕರುಣಿಸಲಿ” ಎಂದು ಹಾವಂಜೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

