ಗೌಡಳ್ಳಿ ಗ್ರಾಮ ಪಂಚಾಯಿತಿ ಸೇರಿದ ನಂದಿಗುಂದ ಬಸ್ ನಿಲ್ದಾಣ ದುರಸ್ತಿ ಮಾಡಿ ಮಾದರಿಯಾದ ರಾಜಣ್ಣ, ಮಂಜು

0
21

ಕೊಡಗು : ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸ್ಥಳೀಯ ಗೌಡಳ್ಳಿ ಗ್ರಾಮ ಪಂಚಾಯತಿಯ ಉದಾಸೀನತೆ ಹಾಗೂ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ನಿಂತು ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಿದ ಶ್ಲಾಘನೀಯ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುಂದ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಂದಿಗುಂದ ಬಸ್ ನಿಲ್ದಾಣದ ಮೇಲ್ಛಾವಣಿಯ ಹಂಚುಗಳು ಸಂಪೂರ್ಣವಾಗಿ ಒಡೆದು ಬಿದ್ದು ಹೋಗಿದ್ದವು. ಇದರಿಂದಾಗಿ ಮಳೆ-ಬಿಸಿಲಿಗೆ ಆಸರೆಯಾಗಬೇಕಾಗಿದ್ದ ನಿಲ್ದಾಣದಲ್ಲಿ ಪ್ರಯಾಣಿಕರು ಯಾರೂ ನಿಲ್ಲಲು ಸಾಧ್ಯವಾಗದಂತಹ ಅತ್ಯಂತ ಧನನೀಯ ಸ್ಥಿತಿ ನಿರ್ಮಾಣವಾಗಿತ್ತು. ಈ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಗೌಡಳ್ಳಿ ಗ್ರಾಮ ಪಂಚಾಯತಿಗೆ ಮನವಿ ಮಾಡಿ, ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಸ್ವಂತ ಖರ್ಚಿನಲ್ಲಿ ಹಂಚು ತಂದು ದುರಸ್ತಿ ಪಂಚಾಯತಿಯವರ ಉದಾಸೀನತೆಯಿಂದ ಬೇಸತ್ತ ಗ್ರಾಮದ ಸಾಮಾಜಿಕ ಕಳಕಳಿಯ ವ್ಯಕ್ತಿ ರಾಜಣ್ಣರವರು, ಕೊನೆಗೆ ತಾವೇ ಖುದ್ದಾಗಿ ಮುಂದೆ ಬಂದಿದ್ದಾರೆ.
ತಮ್ಮ ಮನೆಯಲ್ಲಿದ್ದ ಹಂಚುಗಳನ್ನು ತಂದು, ನೇರವಾಗಿ ಬಸ್ ನಿಲ್ದಾಣದ ಮೇಲೇರಿ ಕೆಲಸ ಆರಂಭಿಸಿದರು. ನಿಲ್ದಾಣದ ಮೇಲೆ ತುಂಬಿಕೊಂಡಿದ್ದ ಕಸಕಡ್ಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಒಡೆದಿದ್ದ ಜಾಗಕ್ಕೆ ಹೊಸ ಹಂಚುಗಳನ್ನು ಜೋಡಿಸುವ ಮೂಲಕ ನಿಲ್ದಾಣಕ್ಕೆ ಕಾಯಕಲ್ಪ ನೀಡಿದ್ದಾರೆ.

ರಾಜಣ್ಣರವರ ಈ ಸತ್ಕಾರ್ಯಕ್ಕೆ ರಾಮನಹಳ್ಳಿ ಮಂಜುರವರು ಕೈಜೋಡಿಸಿ, ಕೆಳಗಿನಿಂದ ಹಂಚುಗಳನ್ನು ನೀಡುವುದು ಹಾಗೂ ನಿಲ್ದಾಣದ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಪ್ರಮುಖವಾಗಿ ಸಹಾಯ ಮಾಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯರಾದ ಗಿರೀಶ್ ಹಾಗೂ ಉತ್ತಪ್ಪ ರವರು ಉಪಸ್ಥಿತರಿದ್ದು, ಇವರ ಈ ಜನಪರ ಕೆಲಸಕ್ಕೆ ಬೆಂಬಲವಾಗಿ ನಿಂತರು.

ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯತಿ ಮಾಡಬೇಕಾಗಿದ್ದ ಕರ್ತವ್ಯವನ್ನು, ವ್ಯವಸ್ಥೆಗೆ ಕಾಯದೇ ತಾವೇ ಸ್ವತಃ ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ಪೂರೈಸಿದ ರಾಜಣ್ಣ ಮತ್ತು ಮಂಜುರವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಜನರ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. “ನಮ್ಮ ಹಳ್ಳಿಯ ಒಳಿತಿಗಾಗಿ ನಾವೇ ಶ್ರಮಿಸಬೇಕು” ಎಂದು ತೋರಿಸಿಕೊಟ್ಟ ಈ ಇಬ್ಬರು ಸಜ್ಜನರು ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here