ಜಮುಯಿ (ಬಿಹಾರ): ಮಿಸ್ಡ್ ಕಾಲ್‌ನಿಂದ ಆರಂಭವಾದ ಪರಿಚಯ ಪ್ರೀತಿಗೆ ತಿರುಗಿ, ಅಂತಿಮವಾಗಿ ಮದುವೆಯಲ್ಲಿ ಅಂತ್ಯಗೊಂಡಿರುವ ಅಪರೂಪದ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ. 36 ವರ್ಷದ ಐದು ಮಕ್ಕಳ ತಾಯಿಯಾಗಿರುವ ಸೀಮಾ ಪರ್ವಿನ್ ಅಲಿಯಾಸ್ ಬಿಂದು ದೇವಿ, 19 ವರ್ಷದ ಮಹಾವೀರ್ ಠಾಕೂರ್ ಅವರನ್ನು ವಿವಾಹವಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ, ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾದುಯಿ ಬರಿಯಾರ್ಪುರ ಗ್ರಾಮದ ನಿವಾಸಿಯಾಗಿರುವ ಸೀಮಾ ಪರ್ವಿನ್ ಹಾಗೂ ಮಹಾವೀರ್ ಠಾಕೂರ್ ನಡುವೆ ಮಿಸ್ಡ್ ಕಾಲ್ ಮೂಲಕ ಪರಿಚಯ ಬೆಳೆದಿತ್ತು. ಬಳಿಕ ಇಬ್ಬರೂ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು.
ಪ್ರೀತಿಯ ಹಿನ್ನೆಲೆಯಲ್ಲಿ ಸೀಮಾ ತನ್ನ ಪತಿ ಹಾಗೂ ಐದು ಮಕ್ಕಳನ್ನು ಬಿಟ್ಟು ಕೋಲ್ಕತ್ತಾಗೆ ತೆರಳಿ ಮಹಾವೀರ್ ಜೊತೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ ಎನ್ನಲಾಗಿದೆ. ಮದುವೆಯ ನಂತರ ಇಬ್ಬರೂ ಒಟ್ಟಿಗೆ ಇರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸೀಮಾ ಪರ್ವಿನ್ ಅವರ ಜೀವನ ಕಥೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಬಿಂದು ದೇವಿ ಎಂಬ ಹೆಸರಿನಲ್ಲಿದ್ದ ಅವರು ಮನನ್ ಆಲಂ ಅವರನ್ನು ಪ್ರೀತಿಸಿ ವಿವಾಹವಾಗಿದ್ದು, ಆ ವೇಳೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸೀಮಾ ಪರ್ವಿನ್ ಎಂಬ ಹೆಸರನ್ನು ಪಡೆದಿದ್ದರು. ಮೊದಲ ಮದುವೆಯಿಂದ ಐದು ಮಕ್ಕಳಿಗೆ ತಾಯಿಯಾಗಿದ್ದ ಅವರು, ಇದೀಗ ಮಹಾವೀರ್ ಠಾಕೂರ್ ಅವರನ್ನು ವಿವಾಹವಾಗಲು ಮತ್ತೆ ಧರ್ಮಾಂತರಗೊಂಡಿದ್ದಾರೆ ಎನ್ನಲಾಗಿದೆ.
ಮೊದಲ ವೈವಾಹಿಕ ಜೀವನದಲ್ಲಿ ಸಂತೋಷ ಇರಲಿಲ್ಲ ಹಾಗೂ ಸಾಕಷ್ಟು ಕಷ್ಟ ಅನುಭವಿಸಿದ್ದೆ ಎಂದು ಸೀಮಾ ಹೇಳಿಕೊಂಡಿದ್ದಾಳೆ. ಇತ್ತ ಮಹಾವೀರ್ ಕೂಡ ತನ್ನ ಇಚ್ಛೆಯಂತೆ ಈ ಮದುವೆ ನಡೆದಿದ್ದು, ಇಬ್ಬರೂ ಸಂತೋಷವಾಗಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದೆಡೆ, ಸೀಮಾ ಅವರ ಮೊದಲ ಪತಿ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದು, ಮಕ್ಕಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಮದುವೆ ಇದೀಗ ಸ್ಥಳೀಯವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

