‘ಗೊಲ್ಮಾಲ್ ಗ್ಯಾಂಗ್’ ಟೀಸರ್ ಬಿಡುಗಡೆ ; ನಗುವಿನ ರಸದೌತಣ ನೀಡಲು ಸಜ್ಜಾದ ಚಿತ್ರತಂಡ

0
13

ಬೆಂಗಳೂರು : ಪ್ರೇಕ್ಷಕರಿಗೆ ಮನರಂಜನೆಯ ಸಂಪೂರ್ಣ ಪ್ಯಾಕೇಜ್ ನೀಡುವ ಉದ್ದೇಶದಿಂದ ನಿರ್ಮಾಣವಾಗಿರುವ ‘ಗೊಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಶಾಂತ್ವು ಯೂನಿವರ್ಸಲ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕೆ. ಸತೀಶ್ ಚಂದ್ರ ಎಲೆಕೆರೆ ನಿರ್ಮಿಸಿರುವ ಈ ಚಿತ್ರವನ್ನು ಶಿವಕುಮಾರ್ ನಿರ್ದೇಶಿಸಿದ್ದಾರೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಿವಕುಮಾರ್, “ಈ ಚಿತ್ರಕ್ಕೆ ನಿರ್ಮಾಪಕರು ಪ್ರತಿಯೊಂದು ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ತಪ್ಪುಗಳಾದಾಗ ತಿದ್ದಿದ್ದಾರೆ. ಚಿತ್ರದಲ್ಲಿ 16ಕ್ಕೂ ಹೆಚ್ಚು ಕಲಾವಿದರಿದ್ದು, ಪ್ರತಿಯೊಬ್ಬ ಪಾತ್ರಕ್ಕೂ ವಿಶೇಷ ಮಹತ್ವವಿದೆ. ‘ಗೊಲ್ಮಾಲ್’ ಮಾಡುವ ಪಾತ್ರಗಳೇ ಹೆಚ್ಚಾಗಿರುವುದರಿಂದ ಚಿತ್ರಕ್ಕೆ ‘ಗೊಲ್ಮಾಲ್ ಗ್ಯಾಂಗ್’ ಎಂಬ ಹೆಸರು ಇಡಲಾಗಿದೆ” ಎಂದು ಹೇಳಿದರು.

ನಿರ್ಮಾಪಕ ಕೆ. ಸತೀಶ್ ಚಂದ್ರ ಎಲೆಕೆರೆ ಮಾತನಾಡಿ, “ಸುಮಾರು 26-27 ವರ್ಷಗಳಿಂದ ಚಿತ್ರರಂಗಕ್ಕೆ ಕಾರ್ಮಿಕರನ್ನು ಪೂರೈಸುತ್ತಿದ್ದೇವೆ. ಚಿತ್ರರಂಗಕ್ಕೆ ಬರುವ ಉದ್ದೇಶ ಮೊದಲಿನಿಂದ ಇರಲಿಲ್ಲ. ನಿರುದ್ಯೋಗ ಸಮಸ್ಯೆ ಕಂಡಾಗ ಹೊಸ ಅವಕಾಶಗಳನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಬ್ಯಾನರ್ ಆರಂಭಿಸಿದ್ದೇವೆ” ಎಂದರು.

ನಾಯಕ ನಟ ಕಾರ್ತಿಕ್ ಮಾತನಾಡಿ, “ನಾನು ಹೀರೋ ಆಗುತ್ತೇನೆ ಎಂದು ಊಹಿಸಿರಲಿಲ್ಲ. ಕೆಲವರು ನನ್ನೊಂದಿಗೆ ನಟಿಸಲು ಹಿಂದೇಟು ಹಾಕಿದರೂ ನಿರ್ಮಾಪಕರು ನನ್ನ ಮೇಲೆ ವಿಶ್ವಾಸ ಇಟ್ಟರು. ಅದೇ ನನಗೆ ದೊಡ್ಡ ಪ್ರೇರಣೆಯಾಯಿತು. ಪ್ರೇಕ್ಷಕರ ಮುಂದೆ ಸಿನಿಮಾ ಬಂದಾಗ ಅದರ ಮೌಲ್ಯ ಗೊತ್ತಾಗಲಿದೆ” ಎಂದು ಹೇಳಿದರು.

ನಾಯಕಿ ಆರಾಧನಾ ಭಟ್ ಮಾತನಾಡಿ, “ಹೀರೋಯಿನ್ ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ‘ಗೊಲ್ಮಾಲ್ ಗ್ಯಾಂಗ್’ ಚಿತ್ರದ ಮೂಲಕ ನನಸಾಗಿದೆ. ಚಿತ್ರದಲ್ಲಿ ಹಲವು ಕುತೂಹಲಕಾರಿ ಪಾತ್ರಗಳಿದ್ದು, ನಾನು ಯಾವ ಗ್ಯಾಂಗ್‌ಗೆ ಸೇರಿದ್ದೇನೆ ಎಂಬುದೇ ಕಥೆಯ ಟ್ವಿಸ್ಟ್” ಎಂದು ತಿಳಿಸಿದರು.

ಚಿತ್ರದಲ್ಲಿ ಹಾಸ್ಯ, ಮನರಂಜನೆ ಮತ್ತು ಹಲವು ಅಚ್ಚರಿಯ ತಿರುವುಗಳಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಭರವಸೆ ಚಿತ್ರತಂಡ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here